ಕಾರ್ಕಳ: ಹಾಡಹಗಲೇ ಮನೆಯ ಮುಂಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ ₹5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹1 ಲಕ್ಷ ನಗದು ದೋಚಿ ಪರಾರಿಯಾಗಿರುವ ಘಟನೆ ಕಾರ್ಕಳ ತಾಲ್ಲೂಕಿನ ಸಾಣೂರು ಗ್ರಾಮದ ಪದ್ಮನಾಭ ನಗರದಲ್ಲಿ ಗುರುವಾರ ನಡೆದಿದೆ. ಸಾಣೂರು ಗ್ರಾಮದ ಪದ್ಮನಾಭ ನಗರದ ‘ಮಹಾಮ್ಮಯ ಕೃಪಾ’ ನಿವಾಸಿ ಗಣೇಶ ಪೈ ಎಂಬುವವರ ಮನೆಯಲ್ಲಿ ಈ ಕಳ್ಳತನ ಸಂಭವಿಸಿದೆ.


ಗುರುವಾರ ಬೆಳಿಗ್ಗೆ 11.10ರಿಂದ ಮಧ್ಯಾಹ್ನ 1 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳ್ಳರು ಕೃತ್ಯ ಎಸಗಿದ್ದಾರೆ. ಮನೆಯ ಎದುರುಗಡೆಯ ಬೀಗ ಮುರಿದು ಒಳಪ್ರವೇಶಿಸಿದ ಖದೀಮರು, ಬೆಡ್‌ರೂಂನಲ್ಲಿದ್ದ ಕಪಾಟಿನ ಬೀಗ ಒಡೆದು ಅದರಲ್ಲಿದ್ದ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಕಳವಾದ ವಸ್ತುಗಳ ವಿವರ:

₹1,00,000 ನಗದು
1 ಪವನ್ ತೂಕದ ಚಿನ್ನದ ಸರ (1)
4 ಪವನ್ ತೂಕದ ಚಿನ್ನದ ಕಡಗ/ಕೈಬಳೆ (1)
7 ಗ್ರಾಂ ತೂಕದ ಚಿನ್ನದ ಉಂಗುರ (1)
1 ಗ್ರಾಂ ತೂಕದ ಚಿನ್ನದ ನಾಣ್ಯ (1)
ಒಟ್ಟು ₹5,00,000 ಮೌಲ್ಯದ ಚಿನ್ನಾಭರಣಗಳು ಹಾಗೂ ₹1 ಲಕ್ಷ ನಗದು ಸೇರಿ ಒಟ್ಟು ₹6 ಲಕ್ಷ ಮೌಲ್ಯದ ಸೊತ್ತು ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.


