ಬಿಜೆಪಿ ಕಾನೂನು ಪ್ರಕೋಷ್ಠದ ಜಿಲ್ಲಾ ಪ್ರಶಿಕ್ಷಣ ವರ್ಗ:ರಾಜಕೀಯ- ಸಂಘಟನಾತ್ಮಕವಾಗಿ ಬೆಳೆಯಲು ಪ್ರಶಿಕ್ಷಣ ವರ್ಗ ಪ್ರಮುಖ ಪಾತ್ರ: ಸತೀಶ್ ಕುಂಪಲ

Prakhara News
2 Min Read

ಮಂಗಳೂರು: ಪಕ್ಷದ ಕಾರ್ಯಕರ್ತರು ರಾಜಕೀಯವಾಗಿ ಪ್ರಬುದ್ಧರಾಗುವುದರ ಜತೆಗೆ ಸಂಘಟನಾತ್ಮಕವಾಗಿ ಬೆಳವಣಿಗೆ ಹೊಂದಲು ‘ಪ್ರಶಿಕ್ಷಣ ವರ್ಗ‘ ಮಹತ್ವದ ಪಾತ್ರ ವಹಿಸುತ್ತವೆ. ಕಾರ್ಯಕರ್ತರಲ್ಲಿ ನಾಯಕತ್ವ ಗುಣ, ಸಂಘಟನಾ ಕೌಶಲ ಮತ್ತು ಪಕ್ಷದ ಸಿದ್ಧಾಂತಗಳ ಬಗ್ಗೆ ಸ್ಪಷ್ಟ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದು ಬಿಜೆಪಿ ದ.ಕ ಜಿಲ್ಲಾಧ್ಯಕ್ಷ‌ ಸತೀಶ್ ಕುಂಪಲ ಹೇಳಿದರು.

ಭಾರತೀಯ ಜನತಾ ಪಕ್ಷದ ದ.ಕ ಜಿಲ್ಲಾ ಕಾನೂನು ಪ್ರಕೋಷ್ಠದ ವತಿಯಿಂದ ಕೊಡಿಯಾಲಬೈಲಿನ ಜಿಲ್ಲಾ ಬಿಜೆಪಿ ಕಚೇರಿಯ ಜಗನ್ನಾಥ ರಾವ್ ಜೋಷಿ ಸೌಧದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ 2026ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಕ್ಷದಲ್ಲಿ ಸುಮಾರು 24 ಪ್ರಕೋಷ್ಠಗಳಿದ್ದು, ಅವುಗಳ ಪೈಕಿ ಪಕ್ಷವನ್ನು ಕಾನೂನಾತ್ಮಕವಾಗಿ ರಕ್ಷಿಸುವ ಬಹುಮುಖ್ಯ ಜವಾಬ್ದಾರಿಯನ್ನು ಕಾನೂನು ಪ್ರಕೋಷ್ಠ ಹೊತ್ತಿದೆ. ಪಕ್ಷವನ್ನು ರಕ್ಷಿಸಲು ವಕೀಲರು ಅನಿವಾರ್ಯವಾಗಿದೆ. ಜಿಲ್ಲೆಯ ಕಾನೂನು ಪ್ರಕೋಷ್ಠ ಬಲಿಷ್ಟವಾಗಿದ್ದು, ಸಾಕಷ್ಟು ಸಂದರ್ಭದಲ್ಲಿ ಕಾರ್ಯಕರ್ತರು, ನಾಯಕರನ್ನು ಕಾನೂನಿನ ಕುಣಿಕೆಗಳಿಂದ ರಕ್ಷಿಸಿದೆ. ರಾಜ್ಯ ಮಟ್ಟದಲ್ಲಿಯೂ ಜಿಲ್ಲೆ ಪ್ರಕೋಷ್ಠಕ್ಕೆ ಉತ್ತಮ ಹೆಸರಿದೆ, ಸಕ್ರಿಯವಾಗಿ ಕೆಲಸ ಮಾಡುತ್ತಿರುವುದು ಇದಕ್ಕೆ ಕಾರಣ ಎಂದರು.

ಜಿಲ್ಲಾ ಸಂಚಾಲಕ ಶ್ರೀಧರ ಶೆಟ್ಟಿ ಪುಳಿಂಚ ಪ್ರಸ್ತಾವಿಸಿ, ಜಿಲ್ಲೆಯ ಒಂಭತ್ತು ಮಂಡಳಗಳಲ್ಲೂ ಕಾನೂನು ಪ್ರಕೋಷ್ಠದ ಘಟಕಗಳನ್ನು ರಚಿಸಲಾಗಿದೆ. ಮುಂಬರುವ ಜಿ.ಪಂ., ತಾ.ಪಂ., ಗ್ರಾ.ಪಂ., ಮನಪಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿಯೂ ಕಾನೂನು ಪ್ರಕೋಷ್ಠದ ಮೇಲಿದೆ. ಪಕ್ಷದ ನಾಯಕರ ಜತೆ ಪ್ರಕೋಷ್ಠ ರಾತ್ರಿ ಹಗಲು ಕೆಲಸ ಮಾಡಲಿದೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು, ಕೇಶವ ಪ್ರಸಾದ್, ರಾಜ್ಯ ಕಾನೂನು ಪ್ರಕೋಷ್ಠ ಸಂಚಾಲಕ ವಸಂತ ಕುಮಾರ್ , ವಿಧಾನ ಪರಿಷತ್ ಮಾಜಿ ಸದಸ್ಯರಾದ ಮೋನಪ್ಪ ಭಂಡಾರಿ,‌ ಪ್ರತಾಪ ಸಿಂಹ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆರ್ವಾರ್, ಪ್ರೇಮಾನಂದ ಶೆಟ್ಟಿ, ಜಿಲ್ಲಾ ಪ್ರಕೋಷ್ಠ ಗಳ ಸಂಯೋಜಕ ಸುಧೀರ್ ಶೆಟ್ಟಿ ಕಣ್ಣೂರು, ಪ್ರಕೋಷ್ಠದ ಸಹ ಸಂಚಾಲಕ ಪ್ರಮೋದ್ ಪೂಜಾರಿ ಕೆರ್ವಾಶೆ ಉಪಸ್ಥಿತರಿದ್ದರು.

ಸನ್ಮಾನ ಕಾರ್ಯಕ್ರಮ:
ಹಿರಿಯ ವಕೀಲರಾದ ಕೆ.ಮೋನಪ್ಪ ಭಂಡಾರಿ, ಸುಧಾಕರ ಜೋಷಿ, ವಾಸುದೇವ‌ಗೌಡ, ಜಗದೀಶ ಶೇಣವ ಮತ್ತು ಸಂತೋಷ್ ಎಸ್.‌ನಾಯಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂದೀಪ್ ವಳಲಂಬೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

Share This Article
Leave a Comment