ಪುತ್ತೂರು: ನವವಿವಾಹಿತೆ ಆತ್ಮಹತ್ಯೆ ಪ್ರಕರಣ-ಇಬ್ಬರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು..!

Prakhara News
1 Min Read

ಪುತ್ತೂರು: ನವವಿವಾಹಿತೆ ವಿಷ ಪದಾರ್ಥ ಸೇವಿಸಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಇಬ್ಬರು ಆರೋಪಿಗಳಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ವೀರಮಂಗಲದ ಸುಂದರ ಅವರ ಪತ್ನಿ ಮಮತಾ (32) ಮೃತಪಟ್ಟವರು. ಅಕ್ಟೋಬರ್ 24ರಂದು ಮನೆಯಲ್ಲಿ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು ತಕ್ಷಣ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 25ರಂದು ಮೃತಪಟ್ಟಿದ್ದರು.

ಮಮತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಅವರು ಮೃತಪಟ್ಟ ಬಳಿಕ ನೀಡಿದ್ದ ಹೇಳಿಕೆಯ ಆಧಾರದಲ್ಲಿ ಪತಿಯ ಸಹೋದರ ಉಮೇಶ್ ಹಾಗೂ ಆತನ ಪತ್ನಿ ವಸಂತಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪುತ್ತೂರಿನ ದಕ್ಷಿಣ ಕನ್ನಡ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 108, 85 ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ಆರೋಪಿಗಳಾದ ವಸಂತಿ ಕೆ. ಮತ್ತು ಉಮೇಶ್ ಬಿ. ಅವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಉಭಯ ಕಡೆಯ ವಾದಗಳನ್ನು ಆಲಿಸಿದ ಬಳಿಕ ಇಬ್ಬರೂ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಆರೋಪಿಗಳ ಪರವಾಗಿ ಚಾಣಕ್ಯ ಲಾ ಚೇಂಬರ್ಸ್‌ನ ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ವಾದ ಮಂಡಿಸಿದ್ದರು.

Share This Article
Leave a Comment