ಮಂಗಳೂರು: ತಂಗಿಯನ್ನು ಪ್ರೀತಿಸುತ್ತಿದ್ದನೆಂಬ ಕಾರಣಕ್ಕೆ ಯುವಕನೊಬ್ಬನನ್ನು ತಲವಾರಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ನಡೆಸಿದ ಮಂಗಳೂರಿನ 6ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು, ನಾಲ್ವರು ಆರೋಪಿಗಳೂ ದೋಷಿಗಳು ಎಂದು ಸಾಬೀತುಪಡಿಸಿ ಜೀವಾವಧಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಘಟನೆಯು ಜನವರಿ 3, 2019 ರಂದು ಮಂಗಳೂರಿನ ಪಂಜಿಮೊಗರು ಮಾಲಾಡಿ ರಸ್ತೆಯ ಎಂ.ವಿ. ಶೆಟ್ಟಿ ಕಾಲೇಜು ಬಳಿ ನಡೆದಿತ್ತು.


ಪ್ರಕರಣದ 1ನೇ ಆರೋಪಿಯಾದ ಸುನಿಲ್ ಕುಮಾರ್ @ ಕೌಟಿ ಎಂಬಾತನ ತಂಗಿಯನ್ನು ರಾಕೇಶ್ ಎಂಬ ಯುವಕ ಪ್ರೀತಿಸುತ್ತಿದ್ದನು ಎಂಬ ಪೂರ್ವದ್ವೇಷದ ಕಾರಣದಿಂದ, ಆರೋಪಿಗಳಾದ (1) ಸುನೀಲ್ ಕುಮಾರ್ @ ಕೌಟಿ, (2) ಪ್ರವೀಣ್ ಪೂಜಾರಿ @ ಚೋಟು, (3) ಪ್ರೀತಮ್ @ ಅಭಿ, ಹಾಗೂ (4) ರೋಹಿತ್ ಕುಮಾರ್ @ ಶೂಟರ್ ಎಂಬುವವರು ಒಟ್ಟಾಗಿ ಸೇರಿ ರಾಕೇಶ್‌ನನ್ನು ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದರು.

ಈ ಭೀಕರ ಕೃತ್ಯಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಕಾವೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶ್ರೀ ಕೆ.ಆರ್. ನಾಯ್ಕ್ ಅವರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (Charge-sheet) ಸಲ್ಲಿಸಿದ್ದರು.

ಮಂಗಳೂರಿನ 6ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆಯಿತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಮಾನ್ಯ ನ್ಯಾಯಾಧೀಶರಾದ ರಾಜೇಶ್ ಮಾರುತಿ ಕಮಟೆ ಅವರು, ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಈ ಕೆಳಗಿನಂತೆ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ:

ಐಪಿಸಿ ಕಲಂ 302, 120(ಬಿ) ಜೊತೆಗೆ 34 ರಡಿ: 1 ರಿಂದ 3 ನೇ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹15,000 ದಂಡ (ದಂಡ ಪಾವತಿಸಲು ವಿಫಲವಾದರೆ 1 ವರ್ಷ ಹೆಚ್ಚಿನ ಜೈಲು ಶಿಕ್ಷೆ).
ಐಪಿಸಿ ಕಲಂ 201 ಜೊತೆಗೆ 34 ರಡಿ: 1 ರಿಂದ 4 ನೇ ಆರೋಪಿಗಳಿಗೆ 3 ವರ್ಷಗಳ ಕಾರಾವಾಸ ಹಾಗೂ ತಲಾ ₹5,000 ದಂಡ (ದಂಡ ಪಾವತಿಸದಿದ್ದಲ್ಲಿ 1 ತಿಂಗಳ ಹೆಚ್ಚಿನ ಶಿಕ್ಷೆ).
ಐಪಿಸಿ ಕಲಂ 212 ಜೊತೆಗೆ 34 ರಡಿ (4ನೇ ಆರೋಪಿಗೆ ಮಾತ್ರ): 3 ವರ್ಷಗಳ ಕಾರಾವಾಸ ಮತ್ತು ₹5,000 ದಂಡ (ದಂಡ ಪಾವತಿಸಲು ವಿಫಲವಾದಲ್ಲಿ 1 ತಿಂಗಳ ಹೆಚ್ಚಿನ ಶಿಕ್ಷೆ).
ಒಟ್ಟು ವಿಧಿಸಲಾದ ₹70,000 ದಂಡದಲ್ಲಿ ₹20,000 ವನ್ನು ಸರ್ಕಾರಕ್ಕೆ ಹಾಗೂ ₹50,000 ವನ್ನು ಮೃತನ ತಂದೆಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮೋತೀಲಾಲ್ ಚೌದರಿ ಅವರು ಸಮರ್ಥ ವಾದ ಮಂಡನೆ ಮಾಡಿದ್ದರು.


