ಪುತ್ತೂರು: ಶಾಸಕರ ಕಚೇರಿ ನೆಪದಲ್ಲಿ ಯುವತಿಯ ಮನೆಗೆ ಕರೆದೊಯ್ದು ಮಾನಭಂಗಕ್ಕೆ ಯತ್ನ; ಆರೋಪಿ ವಿರುದ್ಧ ಪ್ರಕರಣ ದಾಖಲು..!

Prakhara News
2 Min Read

ಪುತ್ತೂರು: ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ಹಾಗೂ ಶಾಸಕರ ಕಚೇರಿಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಯುವತಿಯನ್ನು ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳ, ಮಾನಭಂಗಕ್ಕೆ ಯತ್ನಿಸಿ ಜೀವ ಬೆದರಿಕೆ ಹಾಕಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಲ್ನಾಡು ನಿವಾಸಿ ಜಯರಾಮ ಎಂಬಾತನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತ ಯುವತಿಯು ಮಂಗಳೂರಿನ ವೆನ್‌ಲಾಕ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಡಬದಿಂದ ಪ್ರತಿದಿನ ಮಂಗಳೂರಿಗೆ ಪ್ರಯಾಣಿಸುವುದು ಕಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ, ಜೂನ್ ತಿಂಗಳಿನಿಂದ ಮಂಗಳೂರಿನ ಕೊಟ್ಟಾರಚೌಕಿಯಲ್ಲಿರುವ ತಮ್ಮ ಸಹಪಾಠಿ ಮಮತಾ ಎಂಬುವರ ಮನೆಯಲ್ಲಿ ಪೇಯಿಂಗ್ ಗೆಸ್ಟ್ (PG) ಆಗಿ ವಾಸವಾಗಿದ್ದರು.

ಈ ವೇಳೆ ಯುವತಿಯು ತಮ್ಮ ಮನೆಯ ಜಮೀನಿನ ದಾಖಲೆಗಳಲ್ಲಿ ತೊಡಕಿರುವ ವಿಚಾರವನ್ನು ಮಮತಾ ಅವರ ಬಳಿ ಹಂಚಿಕೊಂಡಿದ್ದರು. ಮಮತಾ ಅವರ ಪತಿ ಜಯರಾಮ, ತಾನು ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಆಗಸ್ಟ್ 17ರಂದು ಯುವತಿಯ ಮನೆಯ ಎಲ್ಲಾ ಜಮೀನಿನ ದಾಖಲೆಗಳನ್ನು ಪಡೆದುಕೊಂಡು ಪುತ್ತೂರು ಶಾಸಕರ ಕಚೇರಿಗೆ ಕರೆದೊಯ್ದಿದ್ದರು. ಆದರೆ ಅಂದು ಕಚೇರಿಯಲ್ಲಿ ಶಾಸಕರು ಇಲ್ಲದ ಕಾರಣ ಇಬ್ಬರೂ ವಾಪಸ್ ಮಂಗಳೂರಿಗೆ ತೆರಳಿದ್ದರು.

ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳ:
ಬಳಿಕ ಆಗಸ್ಟ್ 23ರಂದು ಯುವತಿಗೆ ಕರೆ ಮಾಡಿದ ಜಯರಾಮ, ಮರುದಿನ (ಆಗಸ್ಟ್ 24) ಪುತ್ತೂರಿಗೆ ಒಬ್ಬಳೇ ಬರುವಂತೆ ತಿಳಿಸಿದ್ದರು. ಅದರಂತೆ ಯುವತಿ ಪುತ್ತೂರಿಗೆ ತಲುಪಿದಾಗ, ಶಾಸಕರು ಕಚೇರಿಯಲ್ಲಿ ಇಲ್ಲವೆಂಬ ನೆಪ ಹೇಳಿ ಜಯರಾಮ ತನ್ನ ಸ್ಕೂಟಿಯಲ್ಲಿ ಯುವತಿಯನ್ನು ಪುತ್ತೂರು ಕಸಬಾ ಗ್ರಾಮದ ನೆಲ್ಲಿಗುಂಡಿಯಲ್ಲಿರುವ ತನ್ನ ಮನೆಗೆ ಕರೆದೊಯ್ದಿದ್ದಾನೆ.

ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಯುವತಿಯನ್ನು ಒಳಗಡೆ ಕರೆದು ಬಾಗಿಲು ಲಾಕ್ ಮಾಡಿದ್ದಾನೆ. ಬಳಿಕ ತನ್ನ ಅಂಗಿಯ ಬಟನ್‌ಗಳನ್ನು ಬಿಚ್ಚಿಕೊಂಡು ಏಕಾಏಕಿ ಯುವತಿಯ ಸೊಂಟವನ್ನು ಹಿಡಿದು ಮಾನಭಂಗಕ್ಕೆ ಯತ್ನಿಸಿದ್ದಾನೆ. ಇದರಿಂದ ಆತಂಕಗೊಂಡ ಯುವತಿ ಜೋರಾಗಿ ಬೊಬ್ಬೆ ಹೊಡೆದು, ಬಾಗಿಲು ತೆರೆದು ಅಲ್ಲಿಂದ ತಕ್ಷಣವೇ ತಪ್ಪಿಸಿಕೊಂಡು ಹೊರಬಂದಿದ್ದಾರೆ.

ಜೀವ ಬೆದರಿಕೆ ಮತ್ತು ನಿರಂತರ ಕಿರುಕುಳ:
ಘಟನೆಯ ಬಳಿಕ, “ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಜೀವಸಹಿತ ಬಿಡುವುದಿಲ್ಲ” ಎಂದು ಜಯರಾಮ ಯುವತಿಗೆ ಬೆದರಿಕೆ ಹಾಕಿದ್ದನು. ಅಷ್ಟಕ್ಕೇ ನಿಲ್ಲದೆ, ಮಂಗಳೂರಿನ ತನ್ನ ಮನೆಯಲ್ಲಿಯೂ ಪದೇಪದೇ ಯುವತಿಗೆ ಕಿರುಕುಳ ನೀಡುತ್ತಾ ತನ್ನ ಅನೈತಿಕ ಬೇಡಿಕೆಗೆ ಒಪ್ಪುವಂತೆ ಒತ್ತಡ ಹೇರುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಯ ಬೆದರಿಕೆಗೆ ಹೆದರಿ ಹಾಗೂ ತಮ್ಮ ಕುಟುಂಬಸ್ಥರಿಗೆ ತೊಂದರೆಯಾಗಬಹುದೆಂಬ ಭಯದಿಂದ ಯುವತಿ ಇಷ್ಟು ದಿನ ಸುಮ್ಮನಿದ್ದರು. ಆದರೆ ಆರೋಪಿಯ ಕಿರುಕುಳ ಮಿತಿಮೀರಿದಾಗ ಧೈರ್ಯ ಮಾಡಿ ಇತ್ತೀಚೆಗೆ ತಮ್ಮ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ.

ಸಂತ್ರಸ್ತೆ ನೀಡಿದ ದೂರಿನನ್ವಯ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ಜಯರಾಮ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Share This Article
Leave a Comment