ಕುಂದಾಪುರ: ಶಾನಾಡಿಯಲ್ಲಿ ಭೀಕರ ದುರಂತ; 14 ವರ್ಷದ ಮಗಳನ್ನು ಕೊಂದು ತಾಯಿಯೂ ಜೀವಾಂತ್ಯ..!

Prakhara News
1 Min Read

ಕುಂದಾಪುರ: ಅಂಗವಿಕಲತೆಯಿಂದ ಬಳಲುತ್ತಿದ್ದ ಹೆತ್ತ ಮಗಳನ್ನು ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು, ಬಳಿಕ ಮನನೊಂದು ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಹಾಗೂ ಕರುಣಾಜನಕ ಘಟನೆ ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾನಾಡಿ ಕೊರಗ ಕಾಲನಿಯಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ. ಶಾನಾಡಿ ಕೊರಗ ಕಾಲನಿ ನಿವಾಸಿ ಸುಧಾಕರ್ ಅವರ ಪತ್ನಿ ನೇತ್ರಾವತಿ (40) ಹಾಗೂ ಪುತ್ರಿ ಸುಪ್ರತಿ (14) ಮೃತಪಟ್ಟ ದುರ್ದೈವಿಗಳು.

ಮೃತ ಬಾಲಕಿ ಸುಪ್ರತಿ ಬಾಲ್ಯದಿಂದಲೂ ಅಂಗವಿಕಲತೆಯಿಂದ ಬಳಲುತ್ತಿದ್ದು, ನಡೆದಾಡಲು ಸಹ ಸಾಧ್ಯವಾಗದ ಸ್ಥಿತಿಯಲ್ಲಿದ್ದಳು. ಆಕೆಯ ಚಿಕಿತ್ಸೆಗೆ ಕುಟುಂಬಸ್ಥರು ಎಷ್ಟೇ ಪ್ರಯತ್ನಿಸಿದರೂ ಯಾವುದೇ ಚೇತರಿಕೆ ಕಂಡುಬಂದಿರಲಿಲ್ಲ. ಮಗಳ ಸಂಪೂರ್ಣ ಆರೈಕೆಯನ್ನು ತಾಯಿ ನೇತ್ರಾವತಿಯೇ ಮಾಡುತ್ತಿದ್ದು, ಮಗಳ ದಿನನಿತ್ಯದ ಕಷ್ಟ ಹಾಗೂ ಸ್ಥಿತಿಯನ್ನು ಕಂಡು ತೀವ್ರ ಮನನೊಂದಿದ್ದರು ಎಂದು ಮೃತಳ ಪತಿ ಸುಧಾಕರ್ ತಿಳಿಸಿದ್ದಾರೆ.

ರವಿವಾರ ಬೆಳಿಗ್ಗೆ ಸುಮಾರು 8:30ರ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇತ್ರಾವತಿಯವರು ಮಗಳು ಸುಪ್ರತಿಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ, ಬಳಿಕ ತಾವು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದಂಪತಿಗೆ ಎರಡು ವರ್ಷದ ಗಂಡು ಮಗುವಿದ್ದು, ತಾಯಿ ಹಾಗೂ ಅಕ್ಕ ಇಬ್ಬರನ್ನೂ ಕಳೆದುಕೊಂಡು ಅನಾಥವಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸ್ಥಳೀಯ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment