ಕೊಣಾಜೆ: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರ್ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಪ್ರಕರಣವು ಈಗ ಹತ್ಯೆ ಪ್ರಕರಣವಾಗಿ ಬದಲಾಗಿದೆ. ಇದೊಂದು ಆಕಸ್ಮಿಕ ಅಪಘಾತವಲ್ಲ, ಬದಲಾಗಿ ಪಿಕಪ್ ಚಾಲಕನೊಬ್ಬ ಉದ್ದೇಶಪೂರ್ವಕವಾಗಿ ಯುವಕರ ಸ್ಕೂಟರ್ಗೆ ವಾಹನ ಡಿಕ್ಕಿ ಹೊಡೆಸಿ ಹತ್ಯೆಗೈದಿರುವ ಪೂರ್ವನಿಯೋಜಿತ ಕೃತ್ಯ ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.
ಘಟನೆಯಲ್ಲಿ ಕಿನ್ಯಾ ನಿವಾಸಿಗಳಾದ ಮೊಹಮ್ಮದ್ ಜುನೈದ್ (23) ಹಾಗೂ ಮೊಹಮ್ಮದ್ ಅಫ್ರಾಜ್ (23) ದಾರುಣವಾಗಿ ಮೃತಪಟ್ಟಿದ್ದರು. ಈ ಕೃತ್ಯ ಎಸಗಿರುವ ಆರೋಪಿ ಪಿಕಪ್ ಚಾಲಕನನ್ನು ಹಫೀಜ್ ಅಲಿಯಾಸ್ ಅಪ್ಪಿ ಎಂದು ಗುರುತಿಸಲಾಗಿದ್ದು, ಕೊಣಾಜೆ ಪೊಲೀಸರು ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.


ಮೃತ ಜುನೈದ್ ಅವರ ತಂದೆ ಇಸ್ಮಾಯಿಲ್ ಅವರು ನೀಡಿರುವ ದೂರಿನ ಪ್ರಕಾರ, ಸೋಮವಾರ ಮಧ್ಯಾಹ್ನ 1:30ರ ಸುಮಾರಿಗೆ ಜುನೈದ್ ಹಾಗೂ ಅಫ್ರಾಜ್ ಸ್ಕೂಟರ್ನಲ್ಲಿ ಮನೆಯಿಂದ ತೆರಳಿದ್ದರು. ಸಂಜೆ 4:00 ಗಂಟೆಯ ಸುಮಾರಿಗೆ ರಂತಡ್ಕ ಕ್ರಾಸ್ ಬಳಿ ಆರೋಪಿ ಹಫೀಜ್ ಜೊತೆ ಇಬ್ಬರು ಯುವಕರ ನಡುವೆ ಮಾತಿನ ಚಕಮಕಿ ಹಾಗೂ ಸಣ್ಣ ಮಟ್ಟಿನ ಜಗಳ ನಡೆದಿತ್ತು.
ಜಗಳದ ಬಳಿಕ ಯುವಕರು ತಮ್ಮ ಸ್ಕೂಟರ್ನಲ್ಲಿ ಮುಡಿಪು ಕಡೆಗೆ ಹೊರಟಿದ್ದಾರೆ. ಆದರೆ ಮಾತಿನ ಗಲಾಟೆಯಿಂದ ಆಕ್ರೋಶಗೊಂಡಿದ್ದ ಹಫೀಜ್, ಯುವಕರನ್ನು ಕೊಲ್ಲುವ ಸ್ಪಷ್ಟ ಉದ್ದೇಶದಿಂದ ತನ್ನ ಪಿಕಪ್ ವಾಹನದಲ್ಲಿ ಅವರನ್ನು ಬೆನ್ನಟ್ಟಿದ್ದಾನೆ. ಬೋಲಿಯಾರ್ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿ ತೆರಳುತ್ತಿದ್ದಾಗ ಉದ್ದೇಶಪೂರ್ವಕವಾಗಿ ಪಿಕಪ್ ವಾಹನವನ್ನು ಸ್ಕೂಟರ್ಗೆ ಹಿಂದಿನಿಂದ ಭೀಕರವಾಗಿ ಡಿಕ್ಕಿ ಹೊಡೆಸಿದ್ದಾನೆ.

ಢಿಕ್ಕಿಯ ರಭಸಕ್ಕೆ ಯುವಕರು ರಸ್ತೆಗೆ ಬಿದ್ದು ಸಮೀಪದ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ್ದಾರೆ. ಗಂಭೀರ ಗಾಯಗೊಂಡ ಜುನೈದ್ ಅವರನ್ನು ಕಣಚೂರು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ, ಅಫ್ರಾಜ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕೃತ್ಯ ಎಸಗಿದ ಬಳಿಕ ಚಾಲಕ ಹಫೀಜ್ ಪಿಕಪ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಮೃತರ ತಂದೆಯ ದೂರು ಹಾಗೂ ಸಾಕ್ಷ್ಯಗಳ ಆಧಾರದ ಮೇಲೆ, ಕೊಣಾಜೆ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 103(1) (ಕೊಲೆ ಅಪರಾಧ) ಅಡಿಯಲ್ಲಿ ಎಫ್ಐಆರ್ (ಅಪರಾಧ ಸಂಖ್ಯೆ 112/2026) ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಹಫೀಜ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

