ಬೆಳ್ತಂಗಡಿ: ಡಾ. ಪ್ರದೀಪ್ ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಮೂವರು ಅರೆಸ್ಟ್

Prakhara News
1 Min Read

ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ. ಪ್ರದೀಪ್‌ ಅವರ ಆರೋಗ್ಯ ಕ್ಲಿನಿಕ್‌ಗೆ ತಡರಾತ್ರಿ ಡೀಸೆಲ್ ಸುರಿದು ಬೆಂಕಿ ಹಚ್ಚಿ ನಾಶಪಡಿಸಲು ಯತ್ನಿಸಿದ್ದ ಭೀಕರ ಕೃತ್ಯಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಬೆಳ್ತಂಗಡಿ ಪೊಲೀಸರು  ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಸದ್ರಿ ಪ್ರಕರಣದ ತನಿಖೆ ನಡೆಸಿದ ಬೆಳ್ತಂಗಡಿ ಠಾಣಾ ಪೊಲೀಸರು ಆರೋಪಿಗಳಾದ ಬೆಳ್ತಂಗಡಿ ನಾವೂರು ನಿವಾಸಿಗಳಾದ ರವಿ ಕುಮಾರ್ ಪ್ರಾಯ (31), ಸುರೇಶ್ ಪಿ.ಎನ್ (44) ಮತ್ತು ದಿನೇಶ್ ಪ್ರಭು (51) ಎಂಬವರುಗಳನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ಅಕ್ಟೋಬರ್ 7ರಂದು ನಾವೂರು ಪೇಟೆಯಲ್ಲಿರುವ ಸ್ವಾತಿ ಕಟ್ಟಡದ ಮೊದಲ ಮಹಡಿಯಲ್ಲಿರುವ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್‌ಗೆ ದುಷ್ಕರ್ಮಿಗಳು ತಡರಾತ್ರಿ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದರು. ಘಟನೆಯಿಂದ ಕ್ಲಿನಿಕ್‌ನಲ್ಲಿದ್ದ ವಸ್ತುಗಳು ಸುಟ್ಟುಹೋಗಿದ್ದು, ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಈ ಕೃತ್ಯದ ಬೆನ್ನುಬಿದ್ದ ಪೊಲೀಸರು, ಒಂದು ವಾರದೊಳಗೆ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಾಥಮಿಕ ಪೊಲೀಸ್ ತನಿಖೆಯಿಂದ ಸ್ಫೋಟಕ ಮಾಹಿತಿ ಹೊರಬಂದಿದ್ದು, ರವಿ ಪೂಜಾರಿ ನೇರವಾಗಿ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಮುಖ ಆರೋಪಿಯಾಗಿದ್ದಾನೆ. ಬಂಧಿತ ಪ್ರಮುಖ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದು, ಉಳಿದ ಇಬ್ಬರ ವಿಚಾರಣೆಯಿಂದ ಕೃತ್ಯದ ಹಿಂದಿನ ಅಸಲಿ ಉದ್ದೇಶ ಏನು ಎಂಬುದು ಶೀಘ್ರದಲ್ಲೇ ಹೊರಬರಲಿದೆ.

Share This Article
Leave a Comment