ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಕಾಮುಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹50,000 ದಂಡ ವಿಧಿಸಿದ ಮಂಗಳೂರು ಕೋರ್ಟ್..!

Prakhara News
2 Min Read

ಮಂಗಳೂರು : ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿಯ ಮೇಲಿನ ಭೀಕರ ಅತ್ಯಾಚಾರ ಹಾಗೂ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಮಾನ್ಯ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದ್ದು, ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಿ ಆದೇಶಿಸಿದೆ. ಕಡಬ ತಾಲೂಕಿನ ರಾಮಕುಂಜ ನಿವಾಸಿ ಶೇಖರ್ ಅಲಿಯಾಸ್ ಸೇಸಪ್ಪ (30) ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ.

ದಿನಾಂಕ 08.05.2021 ರಂದು ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಘಟನೆಯ ಕುರಿತು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಲಾಗಿತ್ತು. ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 40/2021 ರಂತೆ ಭಾರತೀಯ ದಂಡ ಸಂಹಿತೆ (IPC) ಕಲಂ 376(2)(f)(n), 376(3), 506 ಹಾಗೂ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಆಗಿನ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾಗಿದ್ದ (Circle Inspector) ಉಮೇಶ್ ಯು. ರವರು ಪ್ರಕರಣದ ತನಿಖೆ ನಡೆಸಿ, ವೈಜ್ಞಾನಿಕ ಹಾಗೂ ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಆರೋಪಿ ಶೇಖರ್ ಅಲಿಯಾಸ್ ಸೇಸಪ್ಪನ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (Charge sheet) ಸಲ್ಲಿಸಿದ್ದರು.

ಮಂಗಳೂರಿನ ಮಾನ್ಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆದಿದ್ದು, ಮಾನ್ಯ ನ್ಯಾಯಾಧೀಶರಾದ ಸುಮಂಗಲಾ ಚಕಲಬ್ಬಿ ಅವರು ಆರೋಪಿಯ ಮೇಲಿನ ಎಲ್ಲಾ ಆರೋಪಗಳು ಸಾಬೀತಾಗಿವೆ ಎಂದು ಆದೇಶಿಸಿ ಶಿಕ್ಷೆ ಪ್ರಕಟಿಸಿದ್ದಾರೆ: ಪೋಕ್ಸೊ ಕಾಯ್ದೆ 2012ರ ಕಲಂ 5(l) r/w 6 ರ ಅಡಿಯಲ್ಲಿ: ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹25,000 ದಂಡ. ದಂಡ ಪಾವತಿಸಲು ತಪ್ಪಿದ್ದಲ್ಲಿ ಹೆಚ್ಚುವರಿಯಾಗಿ 1 ವರ್ಷದ ಸಾಧಾರಣ ಕಾರಾಗೃಹ ಶಿಕ್ಷೆ.

ಭಾರತೀಯ ದಂಡ ಸಂಹಿತೆ ಕಲಂ 506 (ಜೀವ ಬೆದರಿಕೆ) ಅಡಿಯಲ್ಲಿ: 1 ವರ್ಷದ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹25,000 ದಂಡ. ದಂಡ ತೆರಲು ತಪ್ಪಿದ್ದಲ್ಲಿ ಮತ್ತೊಮ್ಮೆ 1 ವರ್ಷದ ಸಾಧಾರಣ ಶಿಕ್ಷೆ. ಆರೋಪಿಯು ಒಟ್ಟಾರೆಯಾಗಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗಿದ್ದು, ₹50,000 ದಂಡ ಪಾವತಿಸಬೇಕಾಗಿದೆ. ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ (Public Prosecutor) ಪುಷ್ಪರಾಜ್ ಆಡ್ಯಂತಾಯ ಅವರು ಸರ್ಕಾರದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು.

Share This Article
Leave a Comment