ಚಿಕ್ಕಮಗಳೂರು: ದೆವ್ವ ಹಾಗೂ ಭೂತ ಬಿಡಿಸುವ ನೆಪದಲ್ಲಿ ಮಹಿಳೆಯ ಮೂಢನಂಬಿಕೆಯನ್ನು ಬಳಸಿಕೊಂಡು ನಿರಂತರವಾಗಿ ಅತ್ಯಾಚಾರ ಎಸಗಿದ್ದ ಆರೋಪಿ ಸತೀಶ್ ಪಾತ್ರಿಯನ್ನು ಕೊಪ್ಪ ಪೊಲೀಸರು ಬೆಂಗಳೂರಿನ ಜೆ.ಪಿ. ನಗರದಲ್ಲಿ ಬಂಧಿಸಿದ್ದಾರೆ.


ಹಾಸನ ಮೂಲದ ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸತತ ಶೋಧದ ನಂತರ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಹಾಗೂ ತೀರ್ಥಹಳ್ಳಿಯ ಕುದುರೆಗುಂಡಿಗೆ ಕರೆದೊಯ್ದು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದರು. ಈ ಸಂಬಂಧ ಸಂತ್ರಸ್ತೆ ಕೊಪ್ಪ ಹಾಗೂ ಎನ್.ಆರ್. ಪುರ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸತೀಶ್ ಪಾತ್ರಿ ಪರಾರಿಯಾಗಿದ್ದನು.

ಪ್ರಸ್ತುತ ಆರೋಪಿಯ ವಿರುದ್ಧ ಎನ್.ಆರ್. ಪುರ ಠಾಣೆಯಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆಯಡಿ ಹಾಗೂ ಕೊಪ್ಪ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ (IPC/BNS) ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕೋಳಿ ರಕ್ತ ಕುಡಿಸಿದ್ದ ವಿಡಿಯೊ ವೈರಲ್:
ಈ ಹಿಂದೆ ಈತ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಭೂತ ಬಿಡಿಸುವ ನೆಪದಲ್ಲಿ ಬಲವಂತವಾಗಿ ಕೋಳಿ ರಕ್ತ ಕುಡಿಸಿದ್ದ ಆಘಾತಕಾರಿ ವಿಚಾರವೂ ಬೆಳಕಿಗೆ ಬಂದಿತ್ತು. ಈ ಅಮಾನವೀಯ ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ತೀವ್ರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು.

