ಪುತ್ತೂರು: ನ್ಯಾಯಾಲಯದ ವಿಚಾರಣೆಗಾಗಿ ಹಾಜರುಪಡಿಸಿದ್ದ ವೇಳೆ ನ್ಯಾಯಾಲಯದ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲೇ ಪೊಲೀಸರ ವಶದಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದ ಆರೋಪಿಗೆ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಲಯವು 2 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ.


ಪುತ್ತೂರು ಸಿರಿ ಬಾಗಿಲು ನಿವಾಸಿ ಜಯೇಶ್ ಅಲಿಯಾಸ್ ಜಯೇಶ್ ಕಾಂತ್ ಎಸ್., ಶಾಹಿರ್ ಅಲಿಯಾಸ್ ಶಾಕಿರ್ (41) ಶಿಕ್ಷೆಗೆ ಗುರಿಯಾದ ಆರೋಪಿ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಅ.ಕ್ರ. 120/2008ರ ಪ್ರಕರಣದಲ್ಲಿ ಕಲಂ 450, 302 ಹಾಗೂ 201 ಐಪಿಸಿ ಅಡಿಯಲ್ಲಿ ಆರೋಪಿಯಾಗಿದ್ದ ಈತನನ್ನು 2016ರ ಏಪ್ರಿಲ್ 5ರಂದು ಮಂಗಳೂರು ಕಾರಾಗೃಹದಿಂದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಕರೆತರಲಾಗಿತ್ತು. ಈ ವೇಳೆ ನ್ಯಾಯಾಲಯದಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಆರೋಪಿ ಏಕಾಏಕಿ ತಪ್ಪಿಸಿಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದನು.

ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 91/2016ರಂತೆ ಕಲಂ 224 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆ ಪೂರ್ಣಗೊಳಿಸಿ, ಪುತ್ತೂರು ನಗರ ಠಾಣೆಯ ಅಂದಿನ ಉಪನಿರೀಕ್ಷಕ ಖಾದರ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯಲ್ಲಿ ಕಾನೂನು ಅಭಿಯೋಜಕ ಮನೋಜ್ ಕುಮಾರ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.
ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನ ಹಿರಿಯ ಸಿವಿಲ್ ಮತ್ತು ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣಪುರ ಅವರು 2026ರ ಅಕ್ಟೋಬರ್ 5ರಂದು ಆರೋಪಿಗೆ 2 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

