ಹಿರಿಯ ನಟಿ ಅಂಬಿಕಾ ವಿರುದ್ಧ ತಂಗಿ ನಟಿ ರಾಧಾ ಪೊಲೀಸ್ ದೂರು: ₹50 ಕೋಟಿ ವಂಚನೆಗೆ ಯತ್ನಿಸಿದ ಆರೋಪ..!

Prakhara News
2 Min Read

ಚೆನ್ನೈ: ಪ್ರಸಿದ್ಧ ಹಿರಿಯ ನಟಿ ರಾಧಾ ಅವರು ತಮ್ಮ ಸ್ವಂತ ಸಹೋದರಿ ಹಾಗೂ ನಟಿ ಅಂಬಿಕಾ ಮತ್ತು ಸಹೋದರ ಮಲ್ಲಿಕಾರ್ಜುನ್ (ಅರ್ಜುನ್) ವಿರುದ್ಧ ಭಾರಿ ಪ್ರಮಾಣದ ಹಣಕಾಸು ವಂಚನೆಯ ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ಸಹಿ ಇದ್ದ ಖಾಲಿ ಚೆಕ್‌ಗಳನ್ನು ಕದ್ದು ಸುಮಾರು ₹50.8 ಕೋಟಿ ರೂಪಾಯಿ ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಅವರು ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

ಚೆನ್ನೈನ ವಲಸರವಕ್ಕಂನಲ್ಲಿರುವ ನಿವಾಸದಲ್ಲಿ ರಾಧಾ ವಾಸಿಸುತ್ತಿದ್ದು, ವ್ಯಾಪಾರ ಮತ್ತು ಸಿಬ್ಬಂದಿ ಸಂಬಳಕ್ಕಾಗಿ ತಮ್ಮ ಕೊಠಡಿಯಲ್ಲಿ ಸಹಿ ಮಾಡಿದ 5-6 ಖಾಲಿ ಚೆಕ್‌ಗಳನ್ನು ಇರಿಸಿದ್ದರು. ಅದೇ ಮನೆಯ ನೆಲ ಮಹಡಿಯಲ್ಲಿ ವಾಸವಿದ್ದ ನಟಿ ಅಂಬಿಕಾ ಅವರಿಗೆ ಆ ಕೊಠಡಿಗೆ ಪ್ರವೇಶವಿತ್ತು. ತಮ್ಮ ಗೈರುಹಾಜರಿಯಲ್ಲಿ ಅನುಮತಿಯಿಲ್ಲದೆ ಕೊಠಡಿಗೆ ನುಗ್ಗಿ ಚೆಕ್‌ಗಳನ್ನು ಕದಿಯಲಾಗಿದೆ ಎಂದು ರಾಧಾ ಆರೋಪಿಸಿದ್ದಾರೆ.

ಜನವರಿಯಲ್ಲಿ ರಾಧಾ ಅವರ ‘ಎಆರ್‌ಎಸ್ ಗಾರ್ಡನ್ ಸ್ಟುಡಿಯೋ’ ಹೆಸರು ಬದಲಾದ ಕಾರಣ ಹಳೆಯ ಚೆಕ್‌ಗಳನ್ನು ರದ್ದುಗೊಳಿಸಿ ಹೊಸ ಚೆಕ್ ಪುಸ್ತಕ ಬಳಸುವುದಾಗಿ ಐಡಿಬಿಐ (IDBI) ಬ್ಯಾಂಕ್‌ಗೆ ತಿಳಿಸಿದ್ದರು. ಆದರೆ ಸೆಪ್ಟೆಂಬರ್ 17 ರಂದು ಅಂಬಿಕಾ ಹೆಸರಿನಲ್ಲಿ ಒಟ್ಟು ₹50.8 ಕೋಟಿ ಮೌಲ್ಯದ 5 ಹಳೆಯ ಚೆಕ್‌ಗಳನ್ನು (₹11 ಲಕ್ಷ, ₹13.17 ಕೋಟಿ, ₹27.73 ಕೋಟಿ, ₹7 ಕೋಟಿ, ₹1.79 ಕೋಟಿ) ನಗದೀಕರಣಕ್ಕೆ (Cash Deposit) ಹಾಕಿರುವುದಾಗಿ ಬ್ಯಾಂಕ್‌ನಿಂದ ಇ-ಮೇಲ್ ಬಂದಾಗ ಈ ವಂಚನೆ ಬೆಳಕಿಗೆ ಬಂದಿದೆ. ತಕ್ಷಣವೇ ಜಾಗರೂಕರಾದ ರಾಧಾ, ವಹಿವಾಟನ್ನು ತಡೆದಿದ್ದಾರೆ.

ಖಾಲಿ ಚೆಕ್‌ಗಳಲ್ಲಿ ಸಹೋದರ ಅರ್ಜುನ್ ಎಂಬಾತನೇ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ್ದಾನೆ ಎಂದು ರಾಧಾ ಶಂಕೆ ವ್ಯಕ್ತಪಡಿಸಿದ್ದಾರೆ. ಫೆಮಾ (FEMA) ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ ಅರ್ಜುನ್‌ಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದ್ದು, ಆ ಹಣ ತೀರಿಸಲು ಇಬ್ಬರೂ ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ ತಮ್ಮ ಬಳಿಯಿರುವ ಚಿನ್ನ, ವಜ್ರದ ಆಭರಣಗಳು ಹಾಗೂ ಆಸ್ತಿ ಪತ್ರಗಳನ್ನು ಪರಿಶೀಲಿಸದಂತೆ ಅಂಬಿಕಾ ಮತ್ತು ಅರ್ಜುನ್ ತಡೆಯುತ್ತಿದ್ದಾರೆ ಎಂದು ಆರೋಪಿಸಿರುವ ರಾಧಾ, ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಇಬ್ಬರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸಬೇಕೆಂದು ಪೊಲೀಸರನ್ನು ಆಗ್ರಹಿಸಿದ್ದಾರೆ.

Share This Article
Leave a Comment