ಕಾಸರಗೋಡು: ರೈತ ದಂಪತಿಗಳು ತಮ್ಮದೇ ಜಮೀನಿನಲ್ಲಿರುವ ಆವರಣ ಗೋಡೆಯಿಲ್ಲದ ಆಳವಾದ ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕಾಸರಗೋಡಿನ ಬಲಾಲ್ ಪಂಚಾಯತ್ ವ್ಯಾಪ್ತಿಯ ಮಾಲೋಮ್ ಸಮೀಪದ ಕರಿಯೊಟ್ಟುಚಲ್ ವಾರ್ಡ್‌ನಲ್ಲಿ ನಡೆದಿದೆ. ಕರಿಯೊಟ್ಟುಚಲ್‌ನ ಥಡತಿಲ್ ನಿವಾಸಿ ಸಾಬು (56) ಹಾಗೂ ಅವರ ಪತ್ನಿ ಸಾಜಿ ಸಾಬು (52) ಮೃತಪಟ್ಟ ದಂಪತಿ.


ಕುಟುಂಬಸ್ಥರು ಬೆಳಿಗ್ಗೆ 10 ಗಂಟೆಗೆ ಒಟ್ಟಿಗೆ ಉಪಾಹಾರ ಸೇವಿಸಿದ್ದರು. ಬಳಿಕ ಆನ್‌ಲೈನ್ ಪದವಿ ಓದುತ್ತಿರುವ ಪುತ್ರ ಮೆಲ್ಬಿನ್ ಕೊಠಡಿಗೆ ತೆರಳಿ ವ್ಯಾಸಂಗ ಮಾಡಿ ನಿದ್ರಿಸಿದ್ದನು. ಮಧ್ಯಾಹ್ನ 2 ಗಂಟೆಗೆ ಎದ್ದು ನೋಡಿದಾಗ ಹೆತ್ತವರು ಕಾಣಿಸದಿದ್ದಾಗ ಹುಡುಕಾಟ ನಡೆಸಿದ್ದಾನೆ. ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿದ್ದ ಕೃಷಿ ಬಾವಿಯ ಪಂಪ್ ಹೌಸ್ ಮೇಲೆ ಹೆತ್ತವರ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಅನುಮಾನಗೊಂಡು ಬಾವಿಯೊಳಗೆ ನೋಡಿದಾಗ ತಾಯಿ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ.
ಸುಮಾರು 10 ಅಡಿ ಆಳವಿರುವ ಈ ಬಾವಿಗೆ ಯಾವುದೇ ರಕ್ಷಣಾತ್ಮಕ ಗೋಡೆ (Parapet wall) ಇರಲಿಲ್ಲ. ಬಾವಿಯ ಸುತ್ತಲೂ ಗಿಡಗಂಟಿಗಳು ಬೆಳೆದಿದ್ದು, ಬಾವಿಯ ಅಂಚುಗಳು ನೀರಿನ ಕಡೆಗೆ ಇಳಿಜಾರಾಗಿದ್ದವು ಎಂದು ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು ತಿಳಿಸಿದ್ದಾರೆ. ಚೀಮೇನಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶವಗಳನ್ನು ಹೊರತೆಗೆದಿದ್ದಾರೆ. ಘಟನೆಗೆ ಸ್ಪಷ್ಟ ಪ್ರತ್ಯಕ್ಷದರ್ಶಿಗಳಿಲ್ಲದಿದ್ದರೂ, ನೀರನ್ನು ಶುದ್ಧೀಕರಿಸಲು (ಕ್ಲೋರಿನ್ ಹಾಕಲು) ದಂಪತಿಗಳು ಬಾವಿಯ ಬಳಿ ಹೋಗಿರಬಹುದು ಎಂದು ವೆಳ್ಳರಿಕ್ಕುಂಡು ಪೊಲೀಸರು ಶಂಕಿಸಿದ್ದಾರೆ. ಬಾವಿಯ ನೀರಿನಲ್ಲಿ ಹಾಗೂ ಬಳಿಯಿದ್ದ ಬಕೆಟ್‌ನಲ್ಲಿ ಕ್ಲೋರಿನ್ ಅಂಶ ಪತ್ತೆಯಾಗಿದೆ.

ಬಾವಿಯ ಅಂಚಿನಲ್ಲಿ ಯಾರೋ ಜಾರಿ ಬಿದ್ದ ಕುರುಹುಗಳು ಕಂಡುಬಂದಿದ್ದು, ದಂಪತಿ ಪೈಕಿ ಒಬ್ಬರು ಆಕಸ್ಮಿಕವಾಗಿ ಜಾರಿ ಬಿದ್ದಾಗ, ಮತ್ತೊಬ್ಬರು ರಕ್ಷಿಸಲು ಹೋಗಿ ಇಬ್ಬರೂ ನೀರು ಪಾಲಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 7 ಎಕರೆ ಜಮೀನು ಹೊಂದಿದ್ದ ಸಾಬು ಅವರು ಮಾಲೋಮ್‌ನಲ್ಲಿ ದಿನಸಿ ಅಂಗಡಿಯನ್ನೂ ನಡೆಸುತ್ತಿದ್ದರು. ಮೃತದೇಹಗಳನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಶನಿವಾರ ಶವಪರೀಕ್ಷೆ ನಡೆಯಲಿದೆ.

