ಕೊಚ್ಚಿ : ಕೇರಳದ ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ಬರಿಗೈ ಮೀನುಗಾರಿಕೆಯನ್ನು (ತಪ್ಪಿಪಿಡಿಕ್ಕಲ್) ಸೋಶಿಯಲ್ ಮೀಡಿಯಾ ಮೂಲಕ ಜಗತ್ತಿಗೆ ಪರಿಚಯಿಸಿ ಲಕ್ಷಾಂತರ ವೀಕ್ಷಕರ ಮನ ಗೆದ್ದಿದ್ದ ಯೂಟ್ಯೂಬರ್ ಹಾಗೂ ಮೀನುಗಾರಿಕಾ ಮಹಿಳೆ ತಂಬೂರು ಕೆ.ಕೆ (36) ವೈಕೋಮ್ ಬಳಿಯ ತಮ್ಮ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


13 ವರ್ಷದ ಮಗಳೊಂದಿಗೆ ವಾಸವಿದ್ದ ತಂಬೂರು, ಸೋಮವಾರ ಸಂಜೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಧ್ಯಾಹ್ನದ ವೇಳೆ ಈ ದುರಂತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ತಂಬೂರು ಅವರ ಈ ಕಠಿಣ ನಿರ್ಧಾರಕ್ಕೆ ಆನ್ಲೈನ್ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬನ ತೀವ್ರ ಕಿರುಕುಳವೇ ಕಾರಣ ಎಂದು ಅವರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಪಾಲಕ್ಕಾಡ್ ಮೂಲದ ವ್ಯಕ್ತಿಯೊಬ್ಬನ ಜೊತೆ ಆನ್ಲೈನ್ ಮೂಲಕ ಸಂಪರ್ಕದಲ್ಲಿದ್ದ ತಂಬೂರು, ಇತ್ತೀಚಿನ ತಿಂಗಳಲ್ಲಿ ಆತನಿಂದ ತೀವ್ರ ಮಾನಸಿಕ ಹಿಂಸೆ ಅನುಭವಿಸುತ್ತಿದ್ದರು.

ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊಗಳನ್ನು ಚಿತ್ರೀಕರಿಸುವುದು ಹಾಗೂ ಪೋಸ್ಟ್ ಮಾಡುವುದನ್ನು ಆತ ಬಲವಂತವಾಗಿ ನಿಷೇಧಿಸಿದ್ದನು. ಈ ಕಾರಣಕ್ಕಾಗಿಯೇ ‘ಕ್ವೀನ್ ಫಿಶರ್’ (Queen Fisher) ಹೆಸರಿನ ಆಕೆಯ ಜನಪ್ರಿಯ ಚಾನಲ್ಗಳಲ್ಲಿ ಸಡನ್ ಆಗಿ ವೀಡಿಯೊಗಳು ನಿಂತುಹೋಗಿದ್ದವು. ಕಿರುಕುಳ ತಾಳಲಾರದೆ ಇತ್ತೀಚೆಗಷ್ಟೇ ತಂಬೂರು ಆಸ್ಪತ್ರೆಗೂ ದಾಖಲಾಗಿದ್ದರು ಎಂದು ಅವರ ಆಪ್ತ ಪ್ರವೀಣ್ ತಿಳಿಸಿದ್ದಾರೆ.
ಪತಿಯಿಂದ ಬೇರ್ಪಟ್ಟ ಬಳಿಕ ಒಂಟಿ ತಾಯಿಯಾಗಿ ಮಗಳನ್ನು ಸಾಕಿ ಸಲಹಲು ಸಾಹಸಪಡುತ್ತಿದ್ದ ತಂಬೂರು, ವೈಕಮ್ನ ಹಿನ್ನೀರಿನಲ್ಲಿ ಬಲೆ ಅಥವಾ ಕೊಕ್ಕೆಗಳಿಲ್ಲದೆ ಕೇವಲ ಬರಿಗೈಗಳಿಂದ ಮೀನು ಹಿಡಿಯುವ ‘ಥಪ್ಪಿ ಮೀನ್ಪಿಡಿಕ್ಕಲ್’ ಸಾಂಪ್ರದಾಯಿಕ ಪದ್ಧತಿಯನ್ನು ವೀಡಿಯೊ ಮಾಡಲು ಆರಂಭಿಸಿದ್ದರು.
ಆಕೆಯ ಮೊದಲ ಮೀನುಗಾರಿಕೆ ವೀಡಿಯೊ ಬರೋಬ್ಬರಿ 9 ಮಿಲಿಯನ್ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದು ಕರಾವಳಿ ಭಾಗದಲ್ಲಿ ಸನ್ಸೇಶನ್ ಸೃಷ್ಟಿಸಿತ್ತು. ಫೇಸ್ಬುಕ್, ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂಗಳಲ್ಲಿ ಲಕ್ಷಾಂತರ ಫಾಲೋವರ್ಸ್ ಸಂಪಾದಿಸಿದ್ದ ಅವರು ಕಣ್ಮರೆಯಾಗುತ್ತಿದ್ದ ಈ ಪರಂಪರೆಯ ಮುಖ್ಯ ವಾಹಿನಿಯ ಮುಖವಾಗಿದ್ದರು.
ತಂಬೂರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನಸಿಕ ಕಿರುಕುಳದ ಕೋನದಲ್ಲಿ ವೈಕಮ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಕುಟುಂಬಸ್ಥರ ಹೇಳಿಕೆ, ಮೊಬೈಲ್ ಕರೆ ದಾಖಲೆಗಳು (CDR) ಹಾಗೂ ವಾಟ್ಸಾಪ್ ಚಾಟ್ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಕಟ್ಟಿಕ್ಕುನ್ನುವಿನಲ್ಲಿ ತಂಬೂರು ಅವರ ಅಂತ್ಯಕ್ರಿಯೆ ನೆರವೇರಿತು.

