ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಇದ್ದ ಕುಖ್ಯಾತ ವಂಚಕ ಸ್ಯಾಮ್ ಪೀಟರ್ ಬಂಧನ..!

Prakhara News
2 Min Read

ಮಂಗಳೂರು : ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ಮಾಡಿಕೊಂಡು ವಿವಿಧ ರಾಜ್ಯಗಳಲ್ಲಿ ಕೋಟ್ಯಂತರ ರೂಪಾಯಿ ಸುಲಿಗೆ ಹಾಗೂ ವಂಚನೆ ನಡೆಸುತ್ತಿದ್ದ ಕುಖ್ಯಾತ ಆರೋಪಿ ಸ್ಯಾಮ್ ಪೀಟರ್‌ (64) ಎಂಬಾತನನ್ನು ಮಂಗಳೂರು ನಗರ ಸಿಸಿಬಿ (CCB) ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನನ್ನು ಉತ್ತರ ಪ್ರದೇಶದ ಲಖನೌದಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ.

ಸ್ಯಾಮ್ ಪೀಟರ್ @ ಡ್ಯಾನಿ ತಾರಕನ್ @ ಆಂಟನಿ (64). ಮೂಲತಃ ಕೇರಳದ ಕೊಲ್ಲಂ/ಆಲಪ್ಪುಳ ನಿವಾಸಿಯಾದ ಈತ, ಪ್ರಸ್ತುತ ಉತ್ತರ ಪ್ರದೇಶದ ಲಖನೌದ ಸರೋಜಿನಿ ನಗರದ ಮಾನಸ್ ನಗರದಲ್ಲಿ ವಾಸವಾಗಿದ್ದ.
ಆರೋಪಿ ಸ್ಯಾಮ್ ಪೀಟರ್ ತನ್ನದೇ ಆದ ಗ್ಯಾಂಗ್ ರಚಿಸಿಕೊಂಡು, ಎನ್‌ಐಎ ಅಥವಾ ಸಿಬಿಐನಂತಹ ರಾಷ್ಟ್ರೀಯ ತನಿಖಾ ಸಂಸ್ಥೆಗಳ ಉನ್ನತ ಅಧಿಕಾರಿ ಎಂದು ನಟಿಸುತ್ತಿದ್ದ. ಹಣಕಾಸು ವಿವಾದ, ಬ್ಯಾಂಕ್ ಹಾಗೂ ತೆರಿಗೆ ವಂಚನೆ ಪ್ರಕರಣಗಳಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು, ಕೇಸುಗಳಿಂದ ಪಾರು ಮಾಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ.

ಈ ಸಂಬಂಧ 2019ರ ಆಗಸ್ಟ್ 16ರಂದು ಮಂಗಳೂರಿನ ಕದ್ರಿ ಪೊಲೀಸರು ಪಂಪ್‌ವೆಲ್‌ನ ಲಾಡ್ಜ್‌ ಒಂದರ ಮೇಲೆ ದಾಳಿ ನಡೆಸಿ ಸ್ಯಾಮ್ ಪೀಟರ್ ಸೇರಿದಂತೆ ಆತನ ಗ್ಯಾಂಗ್‌ನ 8 ಮಂದಿಯನ್ನು ಬಂಧಿಸಿದ್ದರು. ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ ಆರೋಪಿ, ವಿಚಾರಣೆಗೆ ಹಾಜರಾಗದೆ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ.

11ಕ್ಕೂ ಹೆಚ್ಚು ನಕಲಿ ಹೆಸರುಗಳು, ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್!:
ತನ್ನ ನಿಜವಾದ ಗುರುತನ್ನು ಮರೆಮಾಚಲು ಆರೋಪಿಯು ಸ್ಥಳದಿಂದ ಸ್ಥಳಕ್ಕೆ ತೆರಳಿ ಹೆಸರು ಬದಲಾಯಿಸುತ್ತಿದ್ದ. ತನಿಖೆಯ ವೇಳೆ ಈತ ಆಂಟನಿ, ರಾಹುಲ್ ಪೀಟರ್, ಸ್ಯಾಮ್ ಪೀಟರ್, ರಾಜೇಶ್ ರಾಬಿನ್ಸನ್, ರೀತು ರಿಚರ್ಡ್, ರಾಯ್ ಜೇಕಬ್, ರಾಬಿನ್ ರಿಚರ್ಡ್ಸನ್, ರಾಬಿನ್ ಸನ್, ಆಂಟೋನಿ ಫ್ರಾನ್ಸಿಸ್, ಶಾರೂನ್ ಫ್ರಾನ್ಸಿಸ್ ಹಾಗೂ ಡ್ಯಾನಿ ತಾರಕನ್ ಸೇರಿದಂತೆ ಒಟ್ಟು 11ಕ್ಕೂ ಹೆಚ್ಚು ನಕಲಿ ಹೆಸರುಗಳನ್ನು ಬಳಸುತ್ತಿದ್ದುದು ಬೆಳಕಿಗೆ ಬಂದಿದೆ. ಅಲ್ಲದೆ, ‘ರಾಹುಲ್ ಪೀಟರ್’ ಎಂಬ ಹೆಸರಿನಲ್ಲಿದ್ದ ಈತನ ವಿರುದ್ಧ 2001ರಿಂದಲೇ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ (Interpol Red Corner Notice) ಜಾರಿಯಲ್ಲಿದೆ.

ವಿವಿಧ ರಾಜ್ಯಗಳಲ್ಲಿ 17ಕ್ಕೂ ಹೆಚ್ಚು ಪ್ರಕರಣಗಳು:
ಆರೋಪಿಯ ವಿರುದ್ಧ ಮಂಗಳೂರಿನ ಕದ್ರಿ (ಪೂರ್ವ), ಉಳ್ಳಾಲ, ಕೊಣಾಜೆ, ಬೆಂಗಳೂರು, ಚಿಕ್ಕಬಳ್ಳಾಪುರ, ಉಡುಪಿ, ಕುಶಾಲನಗರ ಸೇರಿದಂತೆ ಬಿಹಾರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್ ಹಾಗೂ ಮಧ್ಯಪ್ರದೇಶಗಳಲ್ಲಿ ಒಟ್ಟು 17ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ಉಳ್ಳಾಲ ಠಾಣೆ ಪ್ರಕರಣದಲ್ಲಿ ಈತನ ವಿರುದ್ಧ 17 ಬಾರಿ ಹಾಗೂ ಕದ್ರಿ ಠಾಣೆ ಪ್ರಕರಣದಲ್ಲಿ 14 ಬಾರಿ ಕೋರ್ಟ್ ವಾರೆಂಟ್ ಹೊರಡಿಸಲಾಗಿತ್ತು. ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ, ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

Share This Article
Leave a Comment