ಮಂಗಳೂರಿನ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ವಿಭಾಗದ ಅಧಿಕಾರಿಗಳು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುದೀರ್ಘ ಪತ್ರ ಬರೆದು ದೂರು ನೀಡಿದ್ದಾರೆ. KRIDL ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯ್ ಹಾಗೂ ಕಿರಿಯ ಇಂಜಿನಿಯರ್ ಪ್ರಜ್ವಲ್ ಅವರು ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡಿ, ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.



ಇಲಾಖೆಯ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರಿಂದ ಈ ಇಬ್ಬರೂ ಅಧಿಕಾರಿಗಳು ವಿವಿಧ ರೀತಿಯಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಶಾಸಕರು ಪತ್ರದಲ್ಲಿ ವಿವರಿಸಿದ್ದಾರೆ. ಪ್ರಮುಖವಾಗಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಲಾಖೆಯ ಸಚಿವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಈ ಅಧಿಕಾರಿಗಳು, “ಸಚಿವರಿಗೆ ಮಾಸಿಕವಾಗಿ ಹಣ ತಲುಪಿಸಬೇಕಾಗಿದೆ” ಎಂದು ಸುಳ್ಳು ಹೇಳಿ ಗುತ್ತಿಗೆದಾರರಿಂದ ಬಲವಂತವಾಗಿ ಕಮಿಷನ್ ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ತಮ್ಮ ಬಳಿ ಅನೇಕ ಗುತ್ತಿಗೆದಾರರಿಂದ ಸಾಕ್ಷ್ಯಾಧಾರ ಸಹಿತ ದೂರುಗಳು ಮತ್ತು ಗಂಭೀರ ಆರೋಪಗಳು ಬಂದಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಸಾರ್ವಜನಿಕ ಹಣದ ದುರುಪಯೋಗ ಮತ್ತು ಸರ್ಕಾರದ ಹೆಸರಿಗೆ ಮಸಿ ಬಳಿಯುವ ಕೃತ್ಯವನ್ನು ತಡೆಯಲು ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಶಾಸಕ ಅಶೋಕ್ ರೈ ಆಗ್ರಹಿಸಿದ್ದಾರೆ. ಆರೋಪಿತ ಅಧಿಕಾರಿಗಳ ವಿರುದ್ಧ ನಿಷ್ಪಕ್ಷಪಾತ ಹಾಗೂ ಸಮಗ್ರ ಇಲಾಖಾ ತನಿಖೆ ನಡೆಸಬೇಕು ಮತ್ತು ತನಿಖೆ ಪೂರ್ಣಗೊಳ್ಳುವವರೆಗೆ ಆಡಳಿತಾತ್ಮಕ ಹಿತದೃಷ್ಟಿಯಿಂದ ಅವರಿಬ್ಬರನ್ನೂ ತಕ್ಷಣವೇ ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರಲ್ಲಿ ಮನವಿ ಮಾಡಿದ್ದಾರೆ.


