ಕಾರ್ಕಳ: ಮಾನಸಿಕ ಖಿನ್ನತೆಯಿಂದ ಮಹಿಳೆಯೋರ್ವರು ಮನೆಯ ಗೋಡೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ಇಂದು ಮುಂಜಾನೆ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಪೊಸ್ರಾಲ್ ಎಂಬಲ್ಲಿ ನಡೆದಿದೆ.
ಶಶಿಕಲಾ (36) ಎಂಬವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೂಲತಃ ಬಂಟ್ವಾಳ ತಾಲೂಕಿನ ವಗ್ಗ ಎಂಬಲ್ಲಿಯ ಇವರು, 2 ವರ್ಷಗಳ ಹಿಂದೆ ಇಲ್ಲಿ ಮನೆ ಖರೀದಿಸಿ 5 ವರ್ಷದ ಪುತ್ರಿ ಹಾಗೂ 11 ವರ್ಷದ ಪುತ್ರನೊಟ್ಟಿಗೆ ವಾಸಿಸುತ್ತಿದ್ದು, ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶಶಿಕಲಾ ಮನೆಯ ಗೋಡೆಯಲ್ಲಿ ‘ನನ್ನ ಸಾವಿಗೆ ಗಂಡನೇ ಕಾರಣ’ ಎಂದು ಬರೆದಿಟ್ಟು ಇಂದು ಮುಂಜಾನೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಾರ್ಕಳ ತಾಲೂಕು ಆಸ್ಪತ್ರೆಗೆ ಸಾಗಿಸಿದ್ದಾರೆ.