ಶಬರಿಮಲೆಯಲ್ಲಿ ಇನ್ನು ಹೊರಗಿನಿಂದ ತುಪ್ಪ ಖರೀದಿ ಬಂದ್: ಭಕ್ತರು ತರುವ ತುಪ್ಪವೇ ಪ್ರಸಾದಕ್ಕೆ ಬಳಕೆ: ದೇವಸ್ವಂ ಮಂಡಳಿ ಅಧ್ಯಕ್ಷ ಕೆ. ಜಯಕುಮಾರ್ ಸ್ಪಷ್ಟನೆ

Prakhara News
1 Min Read

ಶಬರಿಮಲೆ: ಮುಂಬರುವ ಮಂಡಲಂ ಮಹೋತ್ಸವದ ಸಂದರ್ಭದಲ್ಲಿ ಅರವಣ ಸೇರಿದಂತೆ ಪ್ರಸಾದಗಳ ತಯಾರಿಕೆಗೆ ಇನ್ನು ಮುಂದೆ ಹೊರಗಿನಿಂದ ತುಪ್ಪವನ್ನು ಖರೀದಿಸದಿರಲು ನಿರ್ಧರಿಸಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಕೆ. ಜಯಕುಮಾರ್ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಕೆ. ಜಯಕುಮಾರ್, “ಶಬರಿಮಲೆಗೆ ಆಗಮಿಸುವ ಭಕ್ತರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತುಪ್ಪವನ್ನು ಕಾಣಿಕೆಯಾಗಿ ತರುತ್ತಿದ್ದಾರೆ. ಹೀಗಾಗಿ ಭಕ್ತರು ನೀಡುವ ತುಪ್ಪವನ್ನಷ್ಟೇ ಪ್ರಸಾದ ತಯಾರಿಕೆಗೆ ಬಳಸಲು ಮಂಡಳಿ ತೀರ್ಮಾನಿಸಿದೆ. ಹೊರಗಿನಿಂದ ತುಪ್ಪ ಖರೀದಿ ಬಂದ್ ಮಾಡಲು ದೇವರೇ ನಮಗೆ ಈ ದಾರಿ ತೋರಿಸಿದ್ದಾನೆ,” ಎಂದು ಹೇಳಿದರು.

ಶಬರಿಮಲೆಗೆ ಮಿಲ್ಮಾ ಸಂಸ್ಥೆಯಿಂದ ಸರಬರಾಜಾಗುತ್ತಿದ್ದ ತುಪ್ಪ ಪೂರೈಕೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಡೈರಿ ಅಭಿವೃದ್ಧಿ ಇಲಾಖೆಯ ತನಿಖೆಯಿಂದ ಬಯಲಾಗಿದೆ. ಸುಮಾರು 1.5 ಲಕ್ಷ ಲೀಟರ್‌ಗೂ ಹೆಚ್ಚು ಕಳಪೆ ಗುಣಮಟ್ಟದ ತುಪ್ಪ ದೇವಾಲಯಕ್ಕೆ ತಲುಪಿದ್ದು, ಇದರಿಂದ ಮಿಲ್ಮಾಗೆ ₹85 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಕ್ರೈಂ ಬ್ರಾಂಚ್ ತನಿಖೆ ನಡೆಸುವಂತೆ ದೇವಸ್ವಂ ಕಾರ್ಯದರ್ಶಿ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಈ ವಿಷಯ ಹಾಗೂ ಮುಂದಿನ ತನಿಖೆಯ ಕುರಿತು ದೇವಸ್ವಂ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಯಕುಮಾರ್ ಸ್ಪಷ್ಟಪಡಿಸಿದರು.

Share This Article
Leave a Comment