ಪುತ್ತೂರು: ಬಿಲ್ಲವ ಹೆಣ್ಣು ಮಕ್ಕಳ ಕುರಿತು ಅವಹೇಳನಕಾರಿ ಪದ ಬಳಕೆ ಆರೋಪದಲ್ಲಿ ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಲಂ 79 ಬಿಎನ್ ಎಸ್ -2023 ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಪುತ್ತೂರು ಡಿವೈಎಸ್ಪಿ ಕಚೇರಿ ಎದುರು ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಪೊಲೀಸರು ಸಂಜೀವ ಪೂಜಾರಿ ಅವರನ್ನು ಅವರ ಮನೆಯಿಂದಲೇ ಬಂಧಿಸಿ ಕರೆದೊಯ್ದರು. ಪೊಲೀಸರು ವಿಚಾರಣೆ ನಡೆಸಿ ಅವರನ್ನು ನ್ಯಾಯಧೀಶರೆದುರು ಹಾಜರುಪಡಿಸಿದರು. ಸುಳ್ಯ ನ್ಯಾಯಾಧೀಶರು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶಿಸಿದರು. ಪಂಜದ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರು ವ್ಯಕ್ತಿಯೊಬ್ಬರೊಂದಿಗೆ ದೂರವಾಣಿ ಮೂಲಕ ಮಾತನಾಡುವ ವೇಳೆ ಬಿಲ್ಲವ ಸಮುದಾಯದ ಮಹಿಳೆಯರ ಬಗ್ಗೆ ಹಾಗೂ ಹೆಣ್ಣು ಮಕ್ಕಳ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಾಗೆಯೇ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೂಡ ವೈರಲ್ ಆಗಿತ್ತು. ಈ ಬಗ್ಗೆ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ವತಿಯಿಂದ ಬೆಳ್ಳಾರೆ ಠಾಣೆಗೆ ದೂರು ನೀಡಲಾಗಿತ್ತು. ಅದರಂತೆ ಅಲ್ಲಿ ಮಹಿಳೆಯರನ್ನು ನಿಂದಿಸಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಶುಕ್ರವಾರ ಪುತ್ತೂರಿನ ಡಿವೈಎಸ್ಪಿ ಕಚೇರಿ ಬಳಿ ಹಿಂದೂ ಸಂಘಟನೆಯವರು ಪ್ರತಿಭಟನೆ ನಡೆಸಿ ಸಂಜೀವ ಪೂಜಾರಿ ಬಂಧನಕ್ಕೆ ಆಗ್ರಹಿಸಿದ್ದರು. ಅದರಂತೆ ಬೆಳ್ಳಾರೆ ಪೊಲೀಸರು ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರನ್ನು ಕಾಣಿಯೂರಿನ ಅವರ ಮನೆಯಿಂದ ಶುಕ್ರವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿ ಅವರನ್ನು ನ್ಯಾಯಧೀಶರೆದುರು ಹಾಜರುಪಡಿಸಿದರು. ನ್ಯಾಯಾಧೀಶರು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶಿಸಿದರು. ಆರೋಪಿ ಸಂಜೀವ ಪೂಜಾರಿಗೆ ಜಾಮೀನು ಮಂಜೂರಾಗುತ್ತಿದ್ದಂತೆ ಹಿಂದೂ ಜಾಗರಣಾ ವೇದಿಕೆ ಮಹತ್ವದ ಬೈಠಕ್ ನಡೆಸಿದ್ದಾರೆ. ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಿದ್ದಾರೆ.