ಬೆಳ್ತಂಗಡಿ: ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯನ್ನು ಬೈಕ್ ನಲ್ಲಿ ಹಿಂಬಾಲಿಸಿ “ನಂಬರ್ ಕೊಡೆ..” ಎಂದು ಪೀಡಿಸುತ್ತಿದ್ದ ಯುವಕ ಈಗ ಜೈಲು ಕಂಬಿ ಎನಿಸುತ್ತಿದ್ದಾನೆ. ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಪುಲ್ಲಾಯಿ ಎಂಬಲ್ಲಿ ಈ ಘಟನೆ ನಡೆದಿದೆ.
ಆರೋಪಿ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ನಿವಾಸಿ, ವೇಣೂರಿನಲ್ಲಿ ಹುಲ್ಲು ಕಟಾವು ಯಂತ್ರದ ಮೆಕ್ಯಾನಿಕ್ ಆಗಿರುವ ಜಮಾಲ್ (24) ಎಂಬವನೆಂದು ಗುರುತಿಸಲಾಗಿದೆ.
ತನ್ನ ಸಂಬಂಧಿ ಹಾಗೂ ನೆರೆಯ ವಿದ್ಯಾರ್ಥಿನಿಯೊಂದಿಗೆ ಕಾಲೇಜಿಗೆ ಹೋಗುತ್ತಿರುವ ವೇಳೆ ಕಳೆದ ಐದು ದಿನಗಳಿಂದ ಆರೋಪಿಯು ಬೈಕಿನಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದುದಲ್ಲದೆ ಬೈಕ್ ನಿಲ್ಲಿಸಿ “ಬೈಕ್ ನಲ್ಲಿ ಬರುತ್ತೀರಾ..?, ನಿಮ್ಮ ಪೋನು ನಂಬ್ರ ಕೊಡಿ” ಎಂದು ಕೇಳುತ್ತಿದ್ದ. ಅಂತೆಯೇ ಅ.15 ರಂದು ಬೆಳಗ್ಗೆ 7.45 ಗಂಟೆಗೆ ಎಂದಿನಂತೆ ಆಕೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ಅತನ ಬೈಕ್ ನ್ನು ಚಲಾಯಿಸಿಕೊಂಡು ಮುಂದಕ್ಕೆ ಹೋಗಿ ವಾಪಾಸು ಹಿಂದಕ್ಕೆ ತಿರುಗಿಸಿಕೊಂಡು ಬಂದು ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ತೊಂದರೆ ನೀಡಿದ್ದಾಗಿ ಆರೋಪಿಸಲಾಗಿದೆ.
ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ವೇಣೂರು ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.