ಕಾಪು: ಟೈಮಿಂಗ್ಸ್ ಗಲಾಟೆ – ರಸ್ತೆಯಲ್ಲೇ ಬಸ್ ಡಿಕ್ಕಿ ಹೊಡೆಸಿಕೊಂಡು ಗಲಾಟೆ ಮಾಡಿದ ಚಾಲಕರು-ಕಂಡಕ್ಟರ್‌ಗಳ ಬಂಧನ, ಎಫ್‌ಐಆರ್ ದಾಖಲು..!

Prakhara News
1 Min Read

ಕಾಪು : ಕಾಪು ಹೊಸ ಮಾರಿಗುಡಿ ಅಂಡರ್ ಪಾಸ್ ಬಳಿಯ ಬಸ್ ನಿಲ್ದಾಣದ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಟೈಮಿಂಗ್ಸ್ ವಿಚಾರಕ್ಕಾಗಿ ಬಸ್‌ಗಳನ್ನು ಪರಸ್ಪರ ಡಿಕ್ಕಿ ಹೊಡೆಸಿಕೊಂಡು ಗಲಾಟೆ ನಡೆಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡಿದ ಘಟನೆಗೆ ಸಂಬಂಧಿಸಿದಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಿನಾಂಕ 27-07-2026 ರಂದು ಬೆಳಿಗ್ಗೆ ಸುಮಾರು 9.27 ಗಂಟೆಗೆ ಕಾಪು ಪಡು ಗ್ರಾಮದ ಕಾಪು ಹೊಸ ಮಾರಿಗುಡಿ ಅಂಡರ್ ಪಾಸ್ ಬಳಿ ಉಡುಪಿಯಿಂದ ಮಂಗಳೂರಿಗೆ ಹೊರಟಿದ್ದ ‘ಸಂದೇಶ್‌’ (SANDESH) ಬಸ್ ಹಾಗೂ ‘ಆನಂದ್‌’ (ANAND) ಬಸ್ಸಿನ ಚಾಲಕರು ಹಾಗೂ ಕಂಡಕ್ಟರ್‌ಗಳು ಟೈಮಿಂಗ್ಸ್ ಕಿರಿಕ್ ಮಾಡಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲೇ ಬಸ್‌ಗಳನ್ನು ಪರಸ್ಪರ ಡಿಕ್ಕಿ ಮಾಡಿಸಿಕೊಂಡು ಕೈ-ಕೈ ಮಿಲಾಯಿಸಿ, ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ತಂದಿದ್ದರು. ಈ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕಾಪು ಠಾಣೆ ಪೊಲೀಸರು ಅಪರಾಧ ಕ್ರಮಾಂಕ: 89/2026 ರಂತೆ Bharatiya Nyaya Sanhita (BNS) ಕಾಯ್ದೆಯ ಸೆಕ್ಷನ್ 281, 194(2), 292, 324(4), 115(2), 352, 351(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಆರೋಪಿಗಳಾದ ಬಸ್ ಚಾಲಕರಾದ ರಮೇಶ್, ಅಭಿಷೇಕ್ ಹಾಗೂ ಬಸ್ ಕಂಡಕ್ಟರ್‌ಗಳಾದ ವಿಜಯಕುಮಾರ್ ಮತ್ತು ಹರೀಶ್ ಬಿ. ಹೆಗ್ಡೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಎರಡೂ ಎಕ್ಸ್‌ಪ್ರೆಸ್ ಬಸ್‌ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment