ಮಂಗಳೂರು : ಬಾಗಲಕೋಟೆಯಲ್ಲಿ ಇತ್ತೀಚೆಗೆ ಸೀಜ್ ಮಾಡಲಾದ ₹5.5 ಕೋಟಿ ಮೌಲ್ಯದ ಎಂಡಿಎಂಎ (MDMA) ಮಾದಕ ವಸ್ತು ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಡ್ರಗ್ಸ್ ಸಾಗಾಟಕ್ಕೆ ಆಂಬ್ಯುಲೆನ್ಸ್ ಬಳಸುತ್ತಿದ್ದ ಬೆಳ್ತಂಗಡಿಯ ಚಾಲಕ ಜಲೀಲ್ ಬಾಬಾ ವಿರುದ್ಧ ಮಂಗಳೂರು ನಗರ ಅಪರಾಧ ವಿಭಾಗ (CCB) ಪೊಲೀಸರು ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಪ್ರಸ್ತುತ ಜಲೀಲ್ ಬಾಬಾ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಜಾಲ ಬೀಸಲಾಗಿದೆ.


ಆರಂಭದಲ್ಲಿ ಮಂಗಳೂರಿನ ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಮನೆಯೊಂದರ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನಿಂದ ₹1.50 ಲಕ್ಷ ಮೌಲ್ಯದ 15.17 ಗ್ರಾಂ MDMA ವಶಪಡಿಸಿಕೊಂಡಿದ್ದರು. ಆತನ ವಿಚಾರಣೆ ವೇಳೆ ದೆಹಲಿಯಿಂದ ಕರೀದಿಸಿ ಬೆಂಗಳೂರು ಮೂಲಕ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳಕ್ಕೆ ಡ್ರಗ್ಸ್ ಪೂರೈಸುವ ಬೃಹತ್ ಜಾಲ ಬೆಳಕಿಗೆ ಬಂದಿತ್ತು.

ತನಿಖೆಯನ್ನು ಮುಂದುವರಿಸಿದ ಪೊಲೀಸರು ಜುಲೈ 15 ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದದ ‘ರಾಯಲ್ ಇನ್ ಲಾಡ್ಜ್’ ಮೇಲೆ ದಾಳಿ ನಡೆಸಿ, ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ತಾಫ್ (28), ಉಜಿರೆಯ ಮೊಹಮ್ಮದ್ ಮುಸ್ತಫಾ (28) ಹಾಗೂ ದೇವನಾರಿ ನಿವಾಸಿ ಅಲ್ಫಾಜ್ ಅವರನ್ನು ಬಂಧಿಸಿದ್ದರು. ಅವರಿಂದ ₹5.5 ಕೋಟಿ ಮೌಲ್ಯದ 5 ಕೆಜಿ 196 ಗ್ರಾಂ MDMA, ಕಾರು ಹಾಗೂ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿತ್ತು.

ಬಂಧಿತ ಆರೋಪಿಗಳ ವಿಚಾರಣೆ ವೇಳೆ, ಈ ಅಂತರರಾಜ್ಯ ಡ್ರಗ್ಸ್ ಜಾಲಕ್ಕೆ ಬೆಳ್ತಂಗಡಿಯ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ ತನ್ನ ತುರ್ತು ವಾಹನವನ್ನು ಬಳಸಿಕೊಳ್ಳಲು ನೆರವಾಗಿದ್ದ ವಿಚಾರ ಬಹಿರಂಗವಾಗಿದೆ. ಕಳೆದ 6 ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿರುವ ಜಲೀಲ್ ಬಾಬಾ ಪತ್ತೆಗಾಗಿ ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಮಾರ್ಗದರ್ಶನದಲ್ಲಿ ವಿಶೇಷ ಪೊಲೀಸ್ ಪಡೆ ರಚಿಸಲಾಗಿದ್ದು, ಸೈಬರ್ ತಂಡ ಕಾರ್ಯಾಚರಣೆ ಮುಂದುವರಿಸಿದೆ.


