ಬೆಳ್ತಂಗಡಿ : ಕುವೆಟ್ಟು ಗ್ರಾಮದ ಶಕ್ತಿನಗರ ಎಂಬಲ್ಲಿ ಅನುಮಾನಾಸ್ಪದವಾಗಿ ಯುವಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಗಳು ನಡೆದಿದ್ದು ಇಲ್ಲಿಂದ ಅಲ್ಯೂಮಿನಿಯಂ ತಂತಿ ಹಾಗೂ ಇತರ ವಸ್ತುಗಳು ಕಳ್ಳತನವಾಗಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕುವೆಟ್ಟು ಗ್ರಾಮದ ಶಕ್ತಿನಗರದಲ್ಲಿರುವ ಎಸ್.ಎಲ್.ವಿ.ಇ ಪವರ್ ಪ್ರೈವೇಟ್ ಲಿಮಿಟೆಡ್ ರಿಸೀವಿಂಗ್ ಸ್ಟೇಷನ್ ನಲ್ಲಿ ಜು.1ರಂದು ರಿಸೀವಿಂಗ್ ಸ್ಟೇಷನ್ ಕಂಪೌಂಡ್ ಒಳಗೆ ತೊಂಡೆಕಾಯಿ ಬೆಳೆಯಲು ಚಪ್ಪರಕ್ಕೆ ಹಾಕಿದ್ದ ಜಿಐ ಸ್ಟೀಲ್ ತಂತಿಗೆ ಸಿಲುಕಿ ಅಥವಾ ಇನ್ಯಾವುದೋ ರೀತಿಯಲ್ಲಿ ಕರಾಯ ಗ್ರಾಮದ ನಿವಾಸಿ ಮುಸ್ತಾಕ್(27) ಎಂಬವರ ಮೃತದೇಹ ಪತ್ತೆಯಾಗಿತ್ತು.

ಮುಸ್ತಾಕ್ ಮೃತದೇಹ ಪತ್ತೆಯಾದ ಸ್ಥಳದ ಹತ್ತಿರ ರಿಸಿವಿಂಗ್ ಸ್ಟೇಷನ್ ನ ಕಂಪೌಂಡ್ ಒಳಗೆ ಉಪಯೋಗಿಸಿ ಉಳಿದ ಹಳೆಯ ಅಲ್ಯೂಮಿನಿಯಂ ತಂತಿ ತುಂಡುಗಳು ಬಿದ್ದಿರುವುದನ್ನು ಕಂಡು ಈ ಬಗ್ಗೆ ಅನುಮಾನಗೊಂಡ ಮ್ಯಾನೇಜರ್ ರಾಜೇಂದ್ರನ್ ಅವರು ರಿಸೀವಿಂಗ್ ಸ್ಟೇಷನ್ ನ ಕಂಪೌಂಡ್ ಒಳಗೆ ಇರಿಸಿದ ಅಲ್ಯೂಮಿನಿಯಂ ತಂತಿಯ ಬಂಡಲ್ ಮತ್ತು ಇನ್ನಿತರ ಸಲಕರಣೆಗಳನ್ನು ಪರಿಶೀಲನೆ ನಡೆಸಿದಾಗ ಹಳೆಯ ಅಲ್ಯೂಮಿನಿಯಂ ತಂತಿ ಕಳ್ಳತನವಾಗಿರುವುದು ತಿಳಿದು, ಈ ವಿಚಾರ ಮೇಲಾಧಿಕಾರಿಗಳಿಗೆ ತಿಳಿಸಿ ಪರಿಶೀಲನೆ ನಡೆಸಿದಾಗ ಸುಮಾರು 50 ಸಾವಿರ ರೂ. ಮೌಲ್ಯದ ಅಲ್ಯೂಮಿನಿಯಂ ತಂತಿ ಕಳ್ಳತನವಾಗಿರುವುದಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆರೋಪದಲ್ಲಿ ಮೃತ ಮುಸ್ತಾಕ್ ಮತ್ತು ಇತರರ ವಿರುದ್ಧ ಕಲಂ: 331(4), 305 ಜೊತೆಗೆ 3(5) ಎನ್ ಎಸ್ ಯಂತೆ ಜು.11 ರಂದು ಪ್ರಕರಣ ದಾಖಲಾಗಿದೆ.


