ಮಂಗಳೂರಿನಲ್ಲಿ ಶೇ 50 ರಿಯಾಯಿತಿ ದಂಡ ವಸೂಲಿ ಭರ್ಜರಿ ಯಶಸ್ಸು..!

Prakhara News
1 Min Read

ಮಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಬಾಕಿ ಉಳಿಸಿಕೊಂಡಿದ್ದ ದಂಡದ ಮೊತ್ತ ಪಾವತಿಗೆ ರಾಜ್ಯ ಸರ್ಕಾರ ಘೋಷಿಸಿದ್ದ ಶೇ. 50 ರಿಯಾಯಿತಿ ಯೋಜನೆಗೆ ಮಂಗಳೂರು ನಗರದಲ್ಲಿ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ವಿಶೇಷ ಕಾರ್ಯಾಚರಣೆಯ ಅವಧಿಯಲ್ಲಿ ಬರೋಬ್ಬರಿ 35,160 ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದ್ದು, ಒಟ್ಟು 92,43,400 ರೂಪಾಯಿ ದಂಡದ ಮೊತ್ತ ವಸೂಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಆದೇಶದನ್ವಯ ಜೂನ್ 21 ರಿಂದ ಜುಲೈ 10 ರವರೆಗೆ ವಾಹನ ಸವಾರರಿಗೆ ಈ ಸುವರ್ಣಾವಕಾಶ ನೀಡಲಾಗಿತ್ತು. ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಅಭಿಯಾನದಲ್ಲಿ ವಾಹನ ಸವಾರರು ಆನ್‌ಲೈನ್ ಹಾಗೂ ಖುದ್ದಾಗಿ ಸಂಚಾರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ದಂಡ ಪಾವತಿಸಿದ್ದಾರೆ.

ಮುಕ್ತಾಯಗೊಂಡ ಒಟ್ಟು ಪ್ರಕರಣಗಳ ಪೈಕಿ ಅತ್ಯಾಧುನಿಕ ಎ-ಐ (Artificial Intelligence) ಕ್ಯಾಮೆರಾಗಳ ಮೂಲಕ ಸ್ವಯಂಚಾಲಿತವಾಗಿ ಸೆರೆಹಿಡಿಯಲಾಗಿದ್ದ 18,792 ಪ್ರಕರಣಗಳು ಸೇರಿವೆ. ಇನ್ನುಳಿದಂತೆ ಸಂಚಾರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ತಮ್ಮ ಕರ್ತವ್ಯದ ಅವಧಿಯಲ್ಲಿ ರಸ್ತೆಗಿಳಿದು ದಾಖಲಿಸಿಕೊಂಡಿದ್ದ 16,368 ಪ್ರಕರಣಗಳು ರಿಯಾಯಿತಿ ದರದಡಿ ಇತ್ಯರ್ಥಗೊಂಡಿವೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.

ಮಂಗಳೂರು ನಗರದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ಸಂಚಾರ ನಿಯಮ ಉಲ್ಲಂಘನೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಭಾರಿ ಇಕ್ಕಟ್ಟಿನ ಕ್ರಮಕ್ಕೆ ಮುಂದಾಗಿದೆ. 2026ನೇ ಸಾಲಿನಲ್ಲಿ ಘೋರ ರಸ್ತೆ ಅಪಘಾತಗಳು ಹಾಗೂ ಗಂಭೀರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು 224 ವಾಹನ ಚಾಲಕರ ಚಾಲನಾ ಪರವಾನಗಿ (DL)ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇವುಗಳನ್ನು ಕಾಯಂ ಅಥವಾ ತಾತ್ಕಾಲಿಕವಾಗಿ ಅಮಾನತುಗೊಳಿಸುವಂತೆ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (RTO) ಕಚೇರಿಗಳಿಗೆ ಶಿಫಾರಸು ಪತ್ರ ರವಾನಿಸಲಾಗಿದೆ. ಈ ಪೈಕಿ ಈಗಾಗಲೇ 137 ಚಾಲನಾ ಪರವಾನಗಿಗಳು ಅಧಿಕೃತವಾಗಿ ಅಮಾನತ್ತಾಗಿದ್ದು, ಬಾಕಿ ಉಳಿದ 87 ಡಿಎಲ್‌ಗಳು ಅಮಾನತ್ತಿನ ವಿವಿಧ ಹಂತದ ಪ್ರಕ್ರಿಯೆಯಲ್ಲಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಸಿದ್ದಾರೆ.

Share This Article
Leave a Comment