ಮಂಗಳೂರು : ಮಾಣಿ–ಸಂಪಾಜೆ ರಸ್ತೆಗೆ ₹49.22 ಕೋಟಿ; ಪ್ರಮುಖ ಹೆದ್ದಾರಿ ಯೋಜನೆಗಳ ಕುರಿತು ಕೇಂದ್ರ ಕಾರ್ಯದರ್ಶಿ ಭೇಟಿ ಮಾಡಿದ ಸಂಸದ ಬ್ರಿಜೇಶ್ ಚೌಟ.

Prakhara News
1 Min Read

ನವದೆಹಲಿ : ದಕ್ಷಿಣ ಕನ್ನಡ ಹಾಗೂ ಒಳನಾಡು ಪ್ರದೇಶಗಳ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ-275ರ ಮಾಣಿ–ಸಂಪಾಜೆ ರಸ್ತೆಯ ತುರ್ತು ದುರಸ್ತಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ₹49.22 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿದೆ.

ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಬಿ. ಉಮಾಶಂಕರ್ ಅವರನ್ನು ಭೇಟಿ ಮಾಡಿ, ಮಾಣಿ–ಸಂಪಾಜೆ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಶೀಘ್ರ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ಮಂಗಳೂರು–ಬೆಂಗಳೂರು ಎಕ್ಸ್‌ಪ್ರೆಸ್‌ವೇ ಯೋಜನೆ, ವಿಶೇಷವಾಗಿ ಶಿರಾಡಿ ಘಾಟ್ ವಿಭಾಗದ ಹೊಸ ರಸ್ತೆ ವಿನ್ಯಾಸಕ್ಕೂ ಚರ್ಚೆ ನಡೆಯಿತು. ಈ ಯೋಜನೆಗೆ ಅಲೈನ್‌ಮೆಂಟ್ ಅನುಮೋದನೆ ದೊರೆತಿರುವುದನ್ನು ಸಂಸದರು ಸ್ವಾಗತಿಸಿದ್ದು, ಪ್ರಸ್ತುತ DPR ಹಾಗೂ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಪ್ರಕ್ರಿಯೆಗಳು ಮುಂದುವರಿದಿವೆ ಎಂದು ತಿಳಿಸಿದರು.

ಸಂಸದ ಕ್ಯಾ. ಚೌಟ ಅವರು ಮಾತನಾಡಿ, ಉತ್ತಮ ರಸ್ತೆ ಸಂಪರ್ಕವು ಹೂಡಿಕೆ, ಉದ್ಯೋಗ ಹಾಗೂ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಅಡಿಪಾಯವಾಗಿದ್ದು, ದಕ್ಷಿಣ ಕನ್ನಡದಲ್ಲಿ ವಿಶ್ವದರ್ಜೆಯ ಸಂಪರ್ಕ ವ್ಯವಸ್ಥೆ ನಿರ್ಮಾಣಕ್ಕಾಗಿ ಈ ಎಲ್ಲ ಯೋಜನೆಗಳು ಶೀಘ್ರ ಜಾರಿಯಾಗುವಂತೆ ನಿರಂತರ ಪ್ರಯತ್ನ ಮುಂದುವರಿಸುವುದಾಗಿ ಹೇಳಿದರು.

Share This Article
Leave a Comment