ಉಡುಪಿ: ಪೆರ್ಡೂರು ಪದ್ಮಕಮಲ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ ನಕಲಿ ದಾಖಲೆ ಹಾಗೂ ನಕಲಿ ಸಹಿ ಸೃಷ್ಟಿಸಿ ಬರೋಬ್ಬರಿ ₹23,00,000 ಹಣವನ್ನು ಸ್ವಂತಕ್ಕೆ ಬಳಸಿ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ಹಿರಿಯಡ್ಕ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿಯಾಗಿದ್ದ ಸುಗಂಧಿ ಹಾಗೂ ಆಕೆಗೆ ಸಾಥ್ ನೀಡಿದ್ದ ಪತಿ ಸಂತೋಷ ಬಂಧಿತ ದಂಪತಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಪೆರ್ಡೂರು ಸಂಜೀವಿನಿ ಒಕ್ಕೂಟದಲ್ಲಿ ಮುಖ್ಯ ಪುಸ್ತಕ ಬರಹಗಾರ್ತಿಯಾಗಿ (Bookkeeper) ಕೆಲಸ ಮಾಡುತ್ತಿದ್ದ ಸುಗಂಧಿ, 2023 ರಿಂದ 2025 ರವರೆಗಿನ ಅವಧಿಯಲ್ಲಿ ಸದಸ್ಯರು ಮರುಪಾವತಿಸಿದ ಸಾಲದ ಹಣವನ್ನು ಅಧಿಕೃತ ರಿಜಿಸ್ಟರ್ನಲ್ಲಿ ಮಾತ್ರ ನಮೂದಿಸಿ, ಒಕ್ಕೂಟದ ಬ್ಯಾಂಕ್ ಖಾತೆಗೆ ಜಮೆ ಮಾಡದೆ ನೇರವಾಗಿ ತನ್ನ ಜೇಬಿಗೆ ಇಳಿಸಿಕೊಂಡಿದ್ದಾಳೆ.

ಇದಷ್ಟೇ ಅಲ್ಲದೆ, ಒಕ್ಕೂಟದ ಕಾರ್ಯಕಾರಿ ಸಮಿತಿಗೆ ಅನುಮಾನ ಬಾರದಂತೆ ತಡೆಯಲು ಆಕೆ ಎರಡು ಪ್ರತ್ಯೇಕ ನಕಲಿ ಸಾಲದ ಖಾತೆ ಪುಸ್ತಕಗಳನ್ನು (Double Ledger) ನಿರ್ವಹಣೆ ಮಾಡಿದ್ದಾಳೆ. ಆಡಿಟಿಂಗ್ ವೇಳೆ ಬೇರೆ ಸದಸ್ಯರಿಗೆ ತೋರಿಸಲು ಒಂದು ಪುಸ್ತಕ ಹಾಗೂ ಕಮಿಟಿಗೆ ತೋರಿಸಲು ಮತ್ತೊಂದು ಪುಸ್ತಕ ಬಳಸಿ ವಂಚಿಸಿದ್ದಾಳೆ. ಒಕ್ಕೂಟದ ಅಧಿಕೃತ ಚೆಕ್ಗಳಿಗೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರ ನಕಲಿ ಸಹಿ (Forgery) ಹಾಕಿ ಬ್ಯಾಂಕ್ನಿಂದ ಲಕ್ಷಾಂತರ ರೂಪಾಯಿ ಡ್ರಾ ಮಾಡಿ ಪತಿಯೊಂದಿಗೆ ಸೇರಿ ದುರ್ಬಳಕೆ ಮಾಡಿಕೊಂಡಿರುವುದು ಬಯಲಾಗಿದೆ.

ಒಕ್ಕೂಟಕ್ಕೆ ಒಟ್ಟು ₹23 ಲಕ್ಷ ರೂಪಾಯಿ ವಂಚಿಸಿರುವ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿತ್ತು. ಪ್ರಕರಣದ ಗಾಂಭೀರ್ಯ ಅರಿತ ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಅವರ ನಿರ್ದೇಶನದಂತೆ ಹಾಗೂ ಬ್ರಹ್ಮಾವರ ಸಿಐ ಗೋಪೀಕೃಷ್ಣ ಮಾರ್ಗದರ್ಶನದಲ್ಲಿ ಹಿರಿಯಡ್ಕ ಸಬ್ ಇನ್ಸ್ಪೆಕ್ಟರ್ಗಳಾದ ಪುನೀತ್ ಕುಮಾರ್, ವಿಠ್ಠಲ ಮಲವಡಕರ ಹಾಗೂ ಸಿಬ್ಬಂದಿ ಕಾರ್ತಿಕ್ ಅವರ ತಂಡ ಜುಲೈ 6 ರಂದು ದಂಪತಿಯನ್ನು ವಶಕ್ಕೆ ಪಡೆದು ಕಠಿಣ ವಿಚಾರಣೆಗೆ ಒಳಪಡಿಸಿದೆ.


