ಮಂಗಳೂರು: ಮಾದಕ ವಸ್ತು ಸೇವನೆ – ಅತ್ತಾವರದಲ್ಲಿ ಇಬ್ಬರು ಯುವಕರ ಬಂಧನ

Prakhara News
1 Min Read

ಮಂಗಳೂರು: ನಗರದ ಅತ್ತಾವರದಲ್ಲಿ ಮಾದಕ ವಸ್ತು ಸೇವನೆ ಮಾಡಿದ್ದ ಇಬ್ಬರು ಯುವಕರನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ವಶಕ್ಕೆ ಪಡೆದು, ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಜುಲೈ 2ರಂದು ತಡರಾತ್ರಿ ಸುಮಾರು 12.30 ಗಂಟೆಗೆ ಅತ್ತಾವರ ಪ್ರದೇಶದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಎಎಸ್‌ಐ ಗಣೇಶ್ ಕುಮಾರ್ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಶಿವಾನಂದ ಅವರಿಗೆ ಅತ್ತಾವರಕಟ್ಟೆ ಸಮೀಪ ಇಬ್ಬರು ಮಾದಕ ವಸ್ತು ಸೇವಿಸಿರುವ ಕುರಿತು ಮಾಹಿತಿ ದೊರೆತಿದೆ. ತಕ್ಷಣ ಸ್ಥಳಕ್ಕೆ ತೆರಳಿದ ವೇಳೆ, ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಇಬ್ಬರು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಅವರನ್ನು ಬೆನ್ನಟ್ಟಿದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಚಾರಣೆಯಲ್ಲಿ ಆರೋಪಿಗಳು ಕುದ್ರೋಳಿ ನಿವಾಸಿ 26 ವರ್ಷದ ಮೊಹಮ್ಮದ್ ಫರ್ಡೀನ್ ಹಾಗೂ ಸುರತ್ಕಲ್ ಕೃಷ್ಣಾಪುರ ನಿವಾಸಿ 27 ವರ್ಷದ ಅಮೀರ್ ಎಂದು ಗುರುತಿಸಲಾಗಿದೆ. ಅವರ ವರ್ತನೆ ಅನುಮಾನಾಸ್ಪದವಾಗಿದ್ದು, ಬಾಯಿಯಿಂದ ಅಮಲು ಪದಾರ್ಥದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸಿದಾಗ ಮಾದಕ ವಸ್ತು ಸೇವಿಸಿರುವುದನ್ನು ಒಪ್ಪಿಕೊಂಡಿದ್ದಾರೆ.

ಬಳಿಕ ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗಾಗಿ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ವರದಿಯಲ್ಲಿ ಮೊಹಮ್ಮದ್ ಫರ್ಡೀನ್ ಮೆಥಾಂಫೆಟಮೈನ್ (Methamphetamine) ಹಾಗೂ ಅಮೀರ್ ಟೆಟ್ರಾಹೈಡ್ರೋಕ್ಯಾನಾಬಿನಾಯ್ಡ್ (THC) ಸೇವಿಸಿರುವುದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (NDPS Act) ಅಡಿಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Share This Article
Leave a Comment