ಮಂಗಳೂರು : ನಗರದ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಜೂನ್ 29ರಂದು ಮುಂಜಾನೆ ಮಹಾರಾಷ್ಟ್ರದ ಕುಟುಂಬವೊಂದನ್ನು ತಡೆದು, ತಲವಾರು ತೋರಿಸಿ ಬೆದರಿಸಿ, ಚಿನ್ನಾಭರಣ ದೋಚಿ ಹೆಂಡತಿ-ಮಗನನ್ನು ಅಪಹರಿಸಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸರು ಇಂಟರ್‌ಸ್ಟೇಟ್ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೇರಳದ ಕಣ್ಣೂರು ಮೂಲದ ನಿಮಿಲ್ ಆರ್.ಕೆ (37) ಹಾಗೂ ದರೋಡೆಕೋರರಿಗೆ ಆಶ್ರಯ ಮತ್ತು ವಾಹನ ನೀಡಿ ಕೃತ್ಯಕ್ಕೆ ಸಹಕರಿಸಿದ ಕೊಡಗು ಜಿಲ್ಲೆಯ ಇರ್ಷಾದ್ (40) ಮತ್ತು ಮುಸ್ತಾಫ (49) ಬಂಧಿತ ಆರೋಪಿಗಳು.


ಮಹಾರಾಷ್ಟ್ರ ಮೂಲದ ವಿಕಾಸ್ ಸುಬ್ಬರಾವ್ ಧನವಡೆ (44) ಅವರು ಜೂನ್ 29ರಂದು ನಸುಕಿನ 2:45ರ ಸುಮಾರಿಗೆ ತಮ್ಮ ಕುಟುಂಬದೊಂದಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಹೆದ್ದಾರಿ ಮೂಲಕ ಕೇರಳದ ಪಯ್ಯನ್ನೂರಿಗೆ ತೆರಳುತ್ತಿದ್ದರು. ಈ ವೇಳೆ ಬೈಕಂಪಾಡಿ ಸಮೀಪ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ 6 ರಿಂದ 7 ಜನ ಮುಸುಕುಧಾರಿ ದರೋಡೆಕೋರರು ವಿಕಾಸ್ ಅವರ ಕಾರನ್ನು ಅಡ್ಡಗಟ್ಟಿದ್ದಾರೆ. ತಲವಾರಿನಿಂದ ಹಲ್ಲೆ ನಡೆಸಿ ವಿಕಾಸ್ ಅವರನ್ನು ಗಾಯಗೊಳಿಸಿದ್ದಾರೆ. ಬಳಿಕ ಅವರ ಪತ್ನಿ ಮತ್ತು ಮಗನನ್ನು ಬಲವಂತವಾಗಿ ಅಪಹರಿಸಿ ಕೆಲ ಕಿಲೋಮೀಟರ್ ದೂರದಲ್ಲಿ ಬಿಟ್ಟಿದ್ದಾರೆ. ತದನಂತರ ಕಾರಿನಲ್ಲಿದ್ದ ₹20 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣ, 2 ಮೊಬೈಲ್ ಹಾಗೂ ₹3 ಲಕ್ಷ ಮೌಲ್ಯದ ಕಾರು ಸೇರಿದಂತೆ ಒಟ್ಟು ₹23.10 ಲಕ್ಷ ಮೌಲ್ಯದ ಸೊತ್ತನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಕಮಿಷನರೇಟ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಜೂನ್ 30ರಂದು ಆರೋಪಿಗಳು ನಂಬರ್ ಪ್ಲೇಟ್ ಇಲ್ಲದೆ ಬಂಟ್ವಾಳದ ಪಚ್ಚಿನಡ್ಕ ಗುಡ್ಡಗಾಡು ಪ್ರದೇಶದಲ್ಲಿ ಬಿಟ್ಟು ಹೋಗಿದ್ದ ದೂರುದಾರರ ಕಾರನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿತ್ತು. ಮುಂದುವರಿದ ಕಾರ್ಯಾಚರಣೆಯಲ್ಲಿ ಪಣಂಬೂರು ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್ ನೇತೃತ್ವದ ತಂಡ ಕೇರಳದ ಕಣ್ಣೂರಿನ ಮಿಮ್ಸ್ ಆಸ್ಪತ್ರೆ ಬಳಿ ಪ್ರಮುಖ ಆರೋಪಿ ನಿಮಿಲ್‌ನನ್ನು ಹೆಡೆಮುರಿ ಕಟ್ಟಿದೆ. ಇತ್ತ ಪಿಎಸ್‌ಐ ಜ್ಞಾನ ಶೇಖರ್ ಅವರ ತಂಡ ಕೊಡಗಿನ ಪೊನ್ನಂಪೇಟೆ ಮತ್ತು ಮೂರ್ನಾಡು ಜಂಕ್ಷನ್‌ನಲ್ಲಿ ದಾಳಿ ನಡೆಸಿ, ದರೋಡೆಕೋರರಿಗೆ ಆಶ್ರಯ ಕೊಟ್ಟಿದ್ದ ಇರ್ಷಾದ್ ಹಾಗೂ ಇನ್ನೋವಾ ಕಾರು ಒದಗಿಸಿದ್ದ ಮುಸ್ತಾಫನನ್ನು ವಶಕ್ಕೆ ಪಡೆದಿದೆ.


ಪ್ರಾಥಮಿಕ ವಿಚಾರಣೆಯಲ್ಲಿ ಈ ಕೃತ್ಯದಲ್ಲಿ ಮಡಿಕೇರಿ ಹಾಗೂ ಕೇರಳ ಮೂಲದ ಒಟ್ಟು 14 ದರೋಡೆಕೋರರು ನೇರವಾಗಿ ಭಾಗಿಯಾಗಿದ್ದು, ಇಬ್ಬರು ಸಹಕರಿಸಿರುವುದು ಪತ್ತೆಯಾಗಿದೆ. ಜುಲೈ 3ರಂದು ಮೂವರನ್ನು ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಕೃತ್ಯಕ್ಕೆ ಬಳಸಿದ 4 ಕಾರುಗಳ ಪೈಕಿ ಒಂದು ಇನ್ನೋವಾ ಕ್ರಿಸ್ಟಾ ಹಾಗೂ ದರೋಡೆಯಾದ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ 13 ಆರೋಪಿಗಳು ಹಾಗೂ ಚಿನ್ನಾಭರಣಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.



