ಪಥನಂತಿಟ್ಟ ಕೇರಳ ಪೊಲೀಸರ ‘ಆಪರೇಷನ್ ತೂಫಾನ್’ ಮಾದಕ ದ್ರವ್ಯ ನಿಗ್ರಹ ಕಾರ್ಯಾಚರಣೆಯ ವೇಳೆ ಮಾದಕ ದ್ರವ್ಯ ವಿರೋಧಿ ಸಂಘಟನೆಯ ರಾಜ್ಯಾಧ್ಯಕ್ಷನನ್ನೇ ಎಂಡಿಎಂಎ ಸಮೇತ ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಡ್ಯಾನ್ಸಾಫ್ (DANSAF) ತಂಡ ದಾಳಿ ನಡೆಸಿ, ಪೆರುಂಪೆಟ್ಟಿ ಸಮೀಪದ ಎಜುಮತ್ತೂರು ನಿವಾಸಿ ಶರ್ಫಿನ್ ಸೆಬಾಸ್ಟಿಯನ್ (25) ಎಂಬಾತನನ್ನು 1.590 ಗ್ರಾಂ ಎಂಡಿಎಂಎ ಸಹಿತ ವಶಕ್ಕೆ ಪಡೆದಿದೆ.


ಶೋಧ ಕಾರ್ಯಾಚರಣೆಯಲ್ಲಿ ಆರೋಪಿ ಕೊಠಡಿಯಲ್ಲಿದ್ದ ಪುಸ್ತಕಗಳ ನಡುವೆ ನಿರ್ಮಿಸಲಾಗಿದ್ದ ರಹಸ್ಯ ಜಾಗದಲ್ಲಿ ಎಂಡಿಎಂಎ ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಅಲ್ಲದೆ, ಮಾದಕ ದ್ರವ್ಯ ಸೇವನೆಗೆ ಬಳಸುವ ಗಾಜಿನ ಪೈಪ್, ಧೂಮಪಾನ ಉಪಕರಣಗಳು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯಿಂದ ‘ಆಂಟಿ ಡ್ರಗ್ ಮೂವ್‌ಮೆಂಟ್ (ADMIN)’ ಸಂಘಟನೆಯ ಯುವ ಘಟಕದ ರಾಜ್ಯಾಧ್ಯಕ್ಷ ಎಂಬ ಗುರುತಿನ ಚೀಟಿಯೂ ಪತ್ತೆಯಾಗಿದೆ. ಕಳೆದ ಕೆಲವು ದಿನಗಳಿಂದ ಆತನ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಸೂಕ್ತ ಸಮಯದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ಮುಖ್ಯಸ್ಥ ಆರ್. ಆನಂದ್ ಅವರ ಮಾಹಿತಿ ಪ್ರಕಾರ, ಶರ್ಫಿನ್ ಸೆಬಾಸ್ಟಿಯನ್ ವಿರುದ್ಧ ಎರ್ನಾಕುಲಂನ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಹಿಳೆಯರ ಮೇಲಿನ ಹಲ್ಲೆ ಸೇರಿದಂತೆ ಎರಡು ಕ್ರಿಮಿನಲ್ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರು ಇದೀಗ ಆರೋಪಿ ಮಾದಕ ವಸ್ತುಗಳ ಜಾಲದೊಂದಿಗೆ ಹೊಂದಿರುವ ಸಂಪರ್ಕ ಹಾಗೂ ಈ ಪ್ರಕರಣದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿರುವ ಸಾಧ್ಯತೆಗಳ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.



