ಮಂಜನಾಡಿ ದುರಂತದ ಸಂತ್ರಸ್ತೆ ಅಶ್ವಿನಿಗೆ ಆಸರೆಯಾದ ಬಿಜೆಪಿ: ಕೃತಕ ಕಾಲುಗಳ ಅಳವಡಿಕೆಗೆ 23 ಲಕ್ಷ ರೂ. ನೆರವು

Prakhara News
2 Min Read

ಮಂಗಳೂರು: ಕಳೆದ ವರ್ಷ ಸಂಭವಿಸಿದ ಮಂಜನಾಡಿ
ದುರಂತದಲ್ಲಿ ಇಬ್ಬರು ಮಕ್ಕಳನ್ನು ಕಳೆದುಕೊಂಡು, ತಾವೂ ಎರಡು ಕಾಲುಗಳನ್ನು ಕಳೆದುಕೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ಅಶ್ವಿನಿ ಅವರಿಗೆ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುತುವರ್ಜಿಯಿಂದ ಕೃತಕ ಕಾಲುಗಳನ್ನು ಅಳವಡಿಸಿಕೊಳ್ಳಲು 23 ಲಕ್ಷ ರೂ.ಗಳ ಆರ್ಥಿಕ ನೆರವು ಹರಿದುಬಂದಿದೆ. ಈ ಮಹತ್ವದ ನೆರವನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಶ್ವಿನಿ ಅವರಿಗೆ ಹಸ್ತಾಂತರಿಸಿದರು.

ಧಾರಾಕಾರ ಮಳೆಗೆ ಮನೆ ಮೇಲೆ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ ಅಶ್ವಿನಿ ಅವರು ತಮ್ಮ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದರು. ಅಷ್ಟೇ ಅಲ್ಲದೆ, ಸ್ವತಃ ಅಶ್ವಿನಿ ಅವರು ಎರಡು ಕಾಲುಗಳನ್ನು, ಅವರ ಮಾವ ಒಂದು ಕಾಲನ್ನು ಕಳೆದುಕೊಂಡಿದ್ದರು. ಅತ್ತೆಯ ಮರಣದಿಂದಾಗಿ ಆ ಕುಟುಂಬ ತೀವ್ರ ಆಘಾತ ಮತ್ತು ಸಂಕಷ್ಟದಲ್ಲಿತ್ತು. ಅಶ್ವಿನಿ ಅವರ ಈ ನೋವಿನ ಸ್ಥಿತಿಯನ್ನು ಗಮನಿಸಿದ ಆರ್‌ಎಸ್‌ಎಸ್‌ ಕಾರ್ಯಕರ್ತರು, ಅವರಿಗೆ ಮರುಜೀವ ನೀಡಲು ಮುಂದಾದರು. ಈ ವಿಷಯವನ್ನು ಪ್ರಕಾಶ್‌ ಪಿ.ಎಸ್‌. ಹಾಗೂ ಸಂತೋಷ್ ಅವರು ಮಾಜಿ ಸಂಸದ ನಳಿನ್ ಕುಮಾ‌ರ್ ಕಟೀಲ್ ಅವರ ಗಮನಕ್ಕೆ ತಂದರು.

ಅಶ್ವಿನಿ ಅವರ ಕಷ್ಟಕ್ಕೆ ಸ್ಪಂದಿಸಿದ ನಳಿನ್ ಕುಮಾರ್ ಕಟೀಲ್‌ ಅವರು, ಮಹಾರಾಷ್ಟ್ರ ಸರ್ಕಾರದ ಸಚಿವ ಮಂಗಲ್ ಪ್ರಭಾತ್ ಲೋಧ ಅವರ ಲೋಧ ಚಾರಿಟೇಬಲ್ ಟ್ರಸ್ಟ್ ಮನವಿ ಮಾಡಿದರು. ತಕ್ಷಣವೇ ಸ್ಪಂದಿಸಿದ ಟ್ರಸ್ಟ್, ಕೃತಕ ಕಾಲುಗಳ ಅಳವಡಿಕೆಗೆ ತಗಲುವ 23 ಲಕ್ಷ ರೂ.ಗಳ ನೆರವನ್ನು ಒದಗಿಸಿದೆ. ಇದೀಗ ಆಂಡೋಲೈಟ್ ಸಂಸ್ಥೆಯು ಕೃತಕ ಕಾಲುಗಳನ್ನು ಅಳವಡಿಸಲು ಸಿದ್ಧತೆ ನಡೆಸಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಸಂಘ ಪರಿವಾರದ ನಿರ್ದೇಶನದಂತೆ ಈ ಸೇವೆಯನ್ನು ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು. ಅಲ್ಲದೆ, ಸಂತ್ರಸ್ತ ಕುಟುಂಬವು ಮನೆ ಮತ್ತು ಜಾಗಕ್ಕಾಗಿ ಮನವಿ ಮಾಡಿದ್ದು, ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರು ಜಾಗ ಒದಗಿಸಿದರೆ, ಮನೆ ನಿರ್ಮಿಸಿಕೊಡುವ ಜವಾಬ್ದಾರಿಯನ್ನು ಬಿಜೆಪಿ ವಹಿಸಿಕೊಳ್ಳಲಿದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ, ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್‌ ಕುವೆತ್ತಬೈಲ್ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

Share This Article
Leave a Comment