ಪಾರದರ್ಶಕ ವರದಿ ಮಾಧ್ಯಮದ ಜವಾಬ್ದಾರಿ: ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ

Prakhara News
2 Min Read

ಮಂಗಳೂರು : ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಜತೆ ಮಾಧ್ಯಮಗಳಿಗೂ ಜವಾಬ್ದಾರಿ ಇದೆ. ಪತ್ರಕರ್ತರು
ಧನಾತ್ಮಕ ವಿಚಾರಗಳಿಗೆ ಆದ್ಯತೆ ನೀಡುವುದರ ಜತೆಗೆ ಸೂಕ್ಷö್ಮ ವಿಚಾರಗಳ ಬಗ್ಗೆ ವರದಿ ಮಾಡುವಾಗ ಎಚ್ಚರ ವಹಿಸಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ದ.ಕ. ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಬದಲಾವಣೆ ಎನ್ನುವುದು ಏಕಾಏಕಿ ಆಗಲು ಸಾಧ್ಯವಿಲ್ಲ ಸಮಾಜವನ್ನು ಕಾಡುತ್ತಿರುವ ಮತೀಯ ಭಾವನೆ ಬದಲಾವಣೆ ಮಾಡುವುದು ಪತ್ರಕರ್ತರಿಂದ ಸಾಧ್ಯ. ಎಲ್ಲವೂ ಶಾಂತಿಯುತವಾಗಿದ್ದಾಗ ಸಣ್ಣಪುಟ್ಟ ಘಟನೆಗಳು ನಡೆದರೆ ಪಾರದರ್ಶಕ ವರದಿಗಾರಿಕೆ ಅಗತ್ಯವಾಗಿದೆ.

ದ.ಕ. ಜಿಲ್ಲೆಯ ಪತ್ರಕರ್ತರು ವಸ್ತುನಿಷ್ಠ ವರದಿಗಾರಿಕೆ ಮತ್ತು ವೃತ್ತಿಪರತೆಗೆ ಹೆಸರಾಗಿದ್ದಾರೆ. ಯಾವುದೇ ಘಟನೆಗಳು ನಡೆದಾಗ ಘಟನೆ ನಡೆದ ಸ್ಥಳಗಳಿಗೆ ತೆರಳಿ ಸರಿಯಾದ ಮಾಹಿತಿಯನ್ನು ಕಲೆ ಹಾಕಿ ವರದಿ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.


ಪತ್ರಿಕಾ ದಿನದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ನ್ಯೂಸ್-೧೮ನ ಪ್ರಧಾನ ಸಂಪಾದಕ ಹರಿಪ್ರಸಾದ್ ಅಡ್ಪಂಗಾಯ ಅವರು, ಮಾಧ್ಯಮ ಇಂದು ಹೆಚ್ಚು ಟೀಕೆಗೆ ಒಳಗಾಗಿದೆ. ಸುಳ್ಳು ಸುದ್ದಿ ಪ್ರಸಾರ ವಾಗುತ್ತಿದೆ ಎನ್ನುವ ಆರೋಪಗಳಿದ್ದು, ಸುಳ್ಳು ಸುದ್ದಿ ತಡೆಯಲು ಪತ್ರಕರ್ತರ ಜವಾಬ್ದಾರಿ ಪ್ರಮುಖವಾಗಿದೆ. ಗಾಸಿಪ್ ತಡೆಯುವುದು ನಮ್ಮ ಎದುರು ಇರುವ ದೊಡ್ಡ ಸವಾಲು ಎಂದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ಪತ್ರಕರ್ತರ ಸದಸ್ಯರ ಮಕ್ಕಳಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಲನ್ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಹಿರಿಯ ಪತ್ರಿಕಾ ವಿತರಕ ತಿಮ್ಮಪ್ಪ ಶೆಟ್ಟಿ ಅವರನ್ನು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸನ್ಮಾನಿಸಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ. ಎನ್ ಅಧ್ಯಕ್ಷತೆ ವಹಿಸಿದ್ದರು.
ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು.ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.

Share This Article
Leave a Comment