ಸುರತ್ಕಲ್: ಪ್ರೀತಿಯ ಹೆಸರಲ್ಲಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ, ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೊಕ್ಸೊ ಪ್ರಕರಣ ದಾಖಲು

Prakhara News
1 Min Read

ಸುರತ್ಕಲ್: ಪ್ರೀತಿಸುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಗರ್ಭಿಣಿಯಾಗಿಸಿ, ಬಳಿಕ ಮದುವೆಯಾಗಲು ನಿರಾಕರಿಸಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಮನನೊಂದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಗಂಜಿಮಠ ಮೂಲದ ಮನೀಶ್ ಪೂಜಾರಿ ಎಂಬಾತನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ದೂರು ದಾಖಲಾಗಿದೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ಮನೀಶ್ ಪೂಜಾರಿ ಅಪ್ರಾಪ್ತ ಬಾಲಕಿಗೆ ಪ್ರೀತಿಯ ನಂಬಿಕೆ ಮೂಡಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದನು. ಇದರ ಪರಿಣಾಮವಾಗಿ ಬಾಲಕಿ ಗರ್ಭಿಣಿಯಾಗಿದ್ದಳು. ಈ ವಿಷಯವನ್ನು ಬಾಲಕಿಯು ಮನೀಶ್‌ಗೆ ತಿಳಿಸಿ ತನ್ನನ್ನು ಮದುವೆಯಾಗುವಂತೆ ಕೋರಿದಾಗ, ಆರೋಪಿಯು ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜವಾಬ್ದಾರಿಯಿಂದ ನುಣುಚಿಕೊಂಡು ತಿರಸ್ಕರಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿಯಿಂದ ತೀವ್ರ ಅವಮಾನ ಹಾಗೂ ವಂಚನೆಗೆ ಒಳಗಾದ ಬಾಲಕಿಯು, ಜೂನ್ 22ರಂದು ತನ್ನ ತಾಯಿಗೆ ನಡೆದಿರುವ ಎಲ್ಲಾ ವಿಚಾರಗಳನ್ನು ತಿಳಿಸಿ ಕಣ್ಣೀರು ಹಾಕಿದ್ದಳು. ಈ ವೇಳೆ ತಾಯಿ ಆಕೆಗೆ ಧೈರ್ಯ ತುಂಬಿ, ಸಮಾಧಾನಪಡಿಸಿದ್ದರು. ಆದರೆ, ಮರುದಿನ ಅಂದರೆ ಮಂಗಳವಾರ ಬೆಳಿಗ್ಗೆ ತಾಯಿ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಸಂಜೆ ಅವರು ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗ ಬಾಲಕಿಯು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮಗಳ ಹಠಾತ್ ಸಾವಿನಿಂದ ಆಘಾತಕ್ಕೊಳಗಾದ ತಾಯಿ ಸುರತ್ಕಲ್ ಪೊಲೀಸ್ ಠಾಣೆಗೆ ಧಾವಿಸಿ ಆರೋಪಿ ವಿರುದ್ಧ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಆರೋಪಿ ಮನೀಶ್ ಪೂಜಾರಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಂಗಳು ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Share This Article
Leave a Comment