17 ಕೋಟಿ ವೆಚ್ಚದಲ್ಲಿ ಅದ್ಧೂರಿ ಮದುವೆಗೆ ಸಿದ್ದತೆ ಆದರೆ…ಫೋಟೋ ಶೂಟ್ ನೆಪದಲ್ಲಿ ಭಾವಿ ಪತಿಯನ್ನು ಪ್ರಪಾತಕ್ಕೆ ತಳ್ಳಿ ಕೊಂದ ಪಾಪಿ ವಧು..!

Prakhara News
2 Min Read

ಪುಣೆ : ಅರಮನೆಯಲ್ಲಿ 17 ಕೋಟಿ ರೂಪಾಯಿ ವೆಚ್ಚದ ಅದ್ಧೂರಿ ವಿವಾಹಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದವು. ಅತಿಥಿಗಳಿಗಾಗಿ ಎರಡು ಖಾಸಗಿ ವಿಮಾನಗಳನ್ನೂ ಬುಕ್ ಮಾಡಲಾಗಿತ್ತು. ಆದರೆ, ಈ ಮದುವೆ ಇಷ್ಟವಿಲ್ಲದ ಭಾವಿ ವಧು, ಪ್ರೀತಿಯ ನಾಟಕವಾಡಿ ತನ್ನ ಪ್ರಿಯಕರನೊಂದಿಗೆ ಸೇರಿ ಉದ್ಯಮಿ ಪುತ್ರನನ್ನು ಲೋಹಗಢ ಕೋಟೆಯ 350 ಅಡಿ ಆಳದ ಪ್ರಪಾತಕ್ಕೆ ತಳ್ಳಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಸತ್ಯ ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಜೂನ್ 19ರಂದು ಲೋಹಗಢ ಕೋಟೆಯಲ್ಲಿ ಸಂಭವಿಸಿದ್ದ ಜೈಪುರ ಮೂಲದ ಕೇತನ್ ವಿಶಾಲ್ ಅಗರ್ವಾಲ್ (25) ಅವರ ನಿಗೂಢ ಸಾವು ಆಕಸ್ಮಿಕವಲ್ಲ, ಅದೊಂದು ವ್ಯವಸ್ಥಿತ ಕೊಲೆ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇತನ್‌ನ ಭಾವಿ ಪತ್ನಿ ಸಿಯಾ ಗೋಯಲ್ (20) ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ (22) ಎಂಬುವವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೃತ ಕೇತನ್, ಪುಣೆ ಬಳಿಯ ಪಿಂಪ್ರಿ-ಚಿಂಚ್‌ವಾಡ್‌ನ ಪ್ರಸಿದ್ಧ ನಿರ್ಮಾಣ ಉದ್ಯಮಿ ವಿಶಾಲ್ ಅಗರ್ವಾಲ್ ಅವರ ಮಗನಾಗಿದ್ದಾನೆ.

ಪೊಲೀಸರ ಪ್ರಕಾರ, ಜೈಪುರ ಮೂಲದ ಕೇತನ್ ಹಾಗೂ ಸಿಯಾ ಗೋಯಲ್ ವಿವಾಹ ಮುಂದಿನ ದಿನಗಳಲ್ಲಿ ರಾಜಸ್ಥಾನದ ಉದಯಪುರದಲ್ಲಿ ನಿಶ್ಚಯವಾಗಿತ್ತು. ಇದಕ್ಕಾಗಿ ಉಭಯ ಕುಟುಂಬಗಳು ಜೈಪುರದಲ್ಲಿ 17 ಕೋಟಿ ರೂ. ವೆಚ್ಚದ ಅರಮನೆಯನ್ನು ಬುಕ್ ಮಾಡಿದ್ದವು. ಆದರೆ, ಸಿಯಾಳಿಗೆ ಈ ಮದುವೆ ಇಷ್ಟವಿರಲಿಲ್ಲ. ಆಕೆ ಚೇತನ್ ಚೌಧರಿಯನ್ನು ಪ್ರೀತಿಸುತ್ತಿದ್ದಳು. ಮದುವೆಯಿಂದ ತಪ್ಪಿಸಿಕೊಳ್ಳಲು ಈ ಹಿಂದೆ ಕೇತನ್ ಜೊತೆ ಬಾಲಿ ಪ್ರವಾಸಕ್ಕೆ ಹೋಗಬೇಕಿದ್ದ ದಿನ ಹೋಟೆಲ್‌ನ ಶೌಚಾಲಯದಲ್ಲಿ ಸಿಯಾ ತನ್ನ ಪಾಸ್‌ಪೋರ್ಟ್ ಅನ್ನೇ ಹರಿದು ಹಾಕಿ, ಪ್ರವಾಸ ರದ್ದಾಗುವಂತೆ ಮಾಡಿದ್ದಳು.

ಕೇತನ್‌ನನ್ನು ಮುಗಿಸಲು ಈ ಕ್ರೂರ ಜೋಡಿ ಈ ಮುನ್ನ ಎರಡು ಬಾರಿ ಸ್ಕೆಚ್ ಹಾಕಿತ್ತು. ಮೇ 31ರಂದು ಮೊದಲ ಬಾರಿ ಲೋಹಗಢ ಕೋಟೆಯ ಚಾರಣದ ವೇಳೆ ಪ್ರಪಾತಕ್ಕೆ ತಳ್ಳಲು ಯತ್ನಿಸಿ ವಿಫಲರಾಗಿದ್ದರು. ಜೂನ್ 14ರಂದು ಎರಡನೇ ಬಾರಿ ಅದೇ ಕೋಟೆಗೆ ಕರೆದೊಯ್ದು ಹಾವಿನ ಭಯ ಹುಟ್ಟಿಸಿ ಕಂದಕಕ್ಕೆ ತಳ್ಳಲು ಯತ್ನಿಸಿದಾಗಲೂ ಇವರ ಪ್ಲಾನ್ ಕೈಕೊಟ್ಟಿತ್ತು. ಆದರೆ, ಜೂನ್ 19ರಂದು ಸಿಯಾ ತನ್ನ ಹುಟ್ಟುಹಬ್ಬದ ದಿನವೇ ಮೂರನೇ ಯತ್ನ ನಡೆಸಿ ಕೊಲೆ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ. ಭಾವಿ ಪತ್ನಿಯ ಬರ್ತ್‌ಡೇಗಾಗಿ ಕೇತನ್ ಮಹಾಬಲೇಶ್ವರದ ಐಷಾರಾಮಿ ರೆಸಾರ್ಟ್‌ನಲ್ಲಿ 40 ರೂಮ್‌ಗಳನ್ನು ಬುಕ್ ಮಾಡಿ ಎಲ್ಲಾ ಸ್ನೇಹಿತರನ್ನು ಆಹ್ವಾನಿಸಿದ್ದ. ಬರ್ತ್‌ಡೇ ನೆಪದಲ್ಲಿ ಸಿಯಾ ಲೋಹಗಢ ಕೋಟೆಯಲ್ಲಿ ಫೋಟೊಶೂಟ್ ಆಯೋಜಿಸಿದ್ದಳು. ಪ್ರಪಾತದ ತುದಿಯಲ್ಲಿ ನಿಂತು ಕೇತನ್ ಫೋಟೊಗೆ ಪೋಸ್ ಕೊಡುತ್ತಿದ್ದಾಗ, ಸಿಯಾ ಸೂಚನೆ ಮೇರೆಗೆ ಚೇತನ್ ಹಿಂದಿನಿಂದ ರಹಸ್ಯವಾಗಿ ಬಂದು ಕೇತನ್‌ನನ್ನು 350 ಅಡಿ ಆಳದ ಪ್ರಪಾತಕ್ಕೆ ತಳ್ಳಿದ್ದ.

ಕಾಲು ಜಾರಿ ಬಿದ್ದಿದ್ದಾನೆ ಎಂದು ಬಿಂಬಿಸಲು ಆರೋಪಿಗಳು ಹರಸಾಹಸ ಪಟ್ಟಿದ್ದರು. ಆರಂಭದಲ್ಲಿ ಪೊಲೀಸರು ಸಹ ಆಕಸ್ಮಿಕ ಸಾವು ಎಂದೇ ಕೇಸ್ ದಾಖಲಿಸಿದ್ದರು. ಆದರೆ ತನಿಖೆಯ ವೇಳೆ ಸಿಯಾ ಪದೇ ಪದೇ ಹೇಳಿಕೆ ಬದಲಿಸುತ್ತಿದ್ದುದರಿಂದ ಪೊಲೀಸರಿಗೆ ತೀವ್ರ ಅನುಮಾನ ಮೂಡಿದೆ. ತಕ್ಷಣವೇ ಆಕೆಯ ಮೊಬೈಲ್ ಕರೆಗಳ ವಿವರ (CDR), ಸಾಮಾಜಿಕ ಜಾಲತಾಣಗಳ ಚಟುವಟಿಕೆ ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಪ್ರಿಯಕರನೊಂದಿಗೆ ಸೇರಿ ಮದುವೆ ತಪ್ಪಿಸಿಕೊಳ್ಳಲು ಹತ್ಯೆ ಮಾಡಿರುವುದು ಪತ್ತೆಯಾಗಿದೆ.

Share This Article
Leave a Comment