ಹಳಿಯಾಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ದಾಂಧಲೆ ನಡೆಸಿ ಕರ್ತವ್ಯ ನಿರತ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದ ಕುಖ್ಯಾತ ರೌಡಿಶೀಟರ್ ಮಂಜುನಾಥ್ ಅಲಿಯಾಸ್ “ಮಚ್ಚ ಮಂಜಾ”ನನ್ನು ಹಳಿಯಾಳ ಪೊಲೀಸರು ಮಹಾರಾಷ್ಟ್ರ ಗಡಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಘಟನೆಯ ಬಳಿಕ ಮೊಬೈಲ್ ಫೋನ್ ಬಳಕೆ ಮಾಡದೇ ತಲೆಮರೆಸಿಕೊಂಡಿದ್ದ ಆರೋಪಿ, ಹಲವು ದಿನಗಳಿಂದ ಪೊಲೀಸರಿಗೆ ಸವಾಲಾಗಿದ್ದ. ಭಾನುವಾರ ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.

ಕೆಲ ದಿನಗಳ ಹಿಂದೆ ಹಳಿಯಾಳದ ಮೌರ್ಯ ಹೋಟೆಲ್ ಎದುರಿನ ಪಾನ್ ಶಾಪ್ ಬಳಿ ಮದ್ಯದ ಅಮಲಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಿದ್ದ ಮಂಜಾ, ಸ್ಥಳಕ್ಕೆ ಬಂದಿದ್ದ ಪೊಲೀಸರ ಮೇಲೆಯೇ ದೌರ್ಜನ್ಯಕ್ಕೆ ಯತ್ನಿಸಿದ್ದ. ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದವು.

ಘಟನೆ ವೇಳೆ ಸ್ಥಳಕ್ಕೆ ಆಗಮಿಸಿದ್ದ ಪಿಎಸ್ಐ ಬಸವರಾಜ ಮಬನೂರು ಆರೋಪಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದೆ ಹಿಂದಿರುಗಿದ್ದರಿಂದ ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ಉಂಟಾಗಿತ್ತು. ಪ್ರಕರಣದ ಹಿನ್ನೆಲೆ ಪಿಎಸ್ಐಯನ್ನು ಅಮಾನತು ಮಾಡಲಾಗಿದ್ದು, ಎಂಟು ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಳಿಯಾಳ ಸಿಪಿಐ ಜೈಪಾಲ್ ಪಾಟೀಲ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಹಳಿಯಾಳ ಹಾಗೂ ದಾಂಡೇಲಿ ಪಿಎಸ್ಐಗಳಾದ ಕೃಷ್ಣಗೌಡ ಅರಕೇರಿ, ಮಹಾಂತೇಶ್ ನಾಯ್ಕ್, ಕಿರಣ್ ಪಾಟೀಲ್ ಸೇರಿದಂತೆ ಹಳಿಯಾಳ, ದಾಂಡೇಲಿ ಮತ್ತು ರಾಮನಗರ ಪೊಲೀಸ್ ಠಾಣೆಗಳ ಸಿಬ್ಬಂದಿ ಸಂಯುಕ್ತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ಮುಂದುವರಿದಿದೆ.


