ಕಾಸರಗೋಡು : ಯುಡಿಎಫ್ ಸರ್ಕಾರದ ಪ್ರಮುಖ ಚುನಾವಣಾ ಭರವಸೆಯಾಗಿದ್ದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ‘ಪ್ರಿಯದರ್ಶಿನಿ’ ಯೋಜನೆ ಜೂನ್ 15ರಿಂದ ಕಾಸರಗೋಡು ಜಿಲ್ಲೆಯಲ್ಲೂ ಜಾರಿಗೆ ಬರಲಿದೆ. ಜಿಲ್ಲೆಯ 75 ಕೆಎಸ್‌ಆರ್‌ಟಿಸಿ ಬಸ್ ಸೇವೆಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.


ವಿಶೇಷವೆಂದರೆ, ಕಾಸರಗೋಡು-ಮಂಗಳೂರು, ಕಾಸರಗೋಡು-ಸುಳ್ಯ ಹಾಗೂ ಕಾಸರಗೋಡು-ಪುತ್ತೂರು ಅಂತರರಾಜ್ಯ ಮಾರ್ಗಗಳಲ್ಲಿ ಸಂಚರಿಸುವ ಕೇರಳ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿಯೂ ಈ ಸೌಲಭ್ಯ ದೊರೆಯಲಿದೆ. ಕಾಸರಗೋಡಿನ ಟೌನ್-ಟು-ಟೌನ್, ಲಿಮಿಟೆಡ್ ಸ್ಟಾಪ್ ಹಾಗೂ ಆರ್ಡಿನರಿ ಬಸ್‌ಗಳಿಗೆ ಯೋಜನೆ ವಿಸ್ತರಿಸಿರುವುದರಿಂದ ಹೆಚ್ಚಿನ ಮಹಿಳಾ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ.

ಕಾಸರಗೋಡು-ಮಂಗಳೂರು ಮಾರ್ಗದಲ್ಲಿ ಪ್ರತಿದಿನ ಬೆಳಿಗ್ಗೆ 4 ಗಂಟೆಯಿಂದ ಆರಂಭವಾಗಿ ಒಟ್ಟು 139 ಬಾರಿ ಕೇರಳ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. ಮಂಗಳೂರು, ಪುತ್ತೂರು ಮತ್ತು ಸುಳ್ಯ ಭಾಗಗಳಿಗೆ ನಿತ್ಯ ಸಂಚರಿಸುವ ವಿದ್ಯಾರ್ಥಿನಿಯರು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಈ ಯೋಜನೆ ಮಹತ್ವದ ನೆರವಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಕಾಸರಗೋಡಿನಲ್ಲಿ ಬೆಳಿಗ್ಗೆ 9 ಗಂಟೆಗೆ ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಹಾಗೂ ಉಪ್ಪಳದಲ್ಲಿ ಶಾಸಕ ಎಕೆಎಂ ಅಶ್ರಫ್ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ಯುಡಿಎಫ್ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿತಿಂಡಿ ವಿತರಿಸುವುದಾಗಿ ಘೋಷಿಸಿದ್ದು, ಯೋಜನೆಗೆ ಭರ್ಜರಿ ಸ್ವಾಗತ ದೊರೆಯುವ ನಿರೀಕ್ಷೆಯಿದೆ.


