ಕಾರ್ಕಳ : ಸುದೀಪ್ ಶೆಟ್ಟಿ ಆತ್ಮಹತ್ಯೆ ಸಂಬಂಧ ಜಾರ್ಜ್ ಶೀಟ್ ಸಲ್ಲಿಕೆಯಾಗಿದ್ದು ಆತ್ಮಹತ್ಯೆಗೆ ಆತನ ಪತ್ನಿ ಸೌಮ್ಯ ಶೆಟ್ಟಿ ದುಷ್ಪ್ರೇರಣೆ ನೀಡಿರುವುದು ಸಾಬೀತಾಗಿದೆ.


ಬೆಳ್ತಂಗಡಿ ತಾಲೂಕು ನೆಲ್ಯಾಡಿ ನಿವಾಸಿ ಸುದೀಪ್ ಶೆಟ್ಟಿ ಮತ್ತು ಕಾರ್ಕಳದ ಬಂಗ್ಲೆಗುಡ್ಡೆಯ ಸೌಮ್ಯ ಶೆಟ್ಟಿಯನ್ನು ಕಳೆದ ಫೆಬ್ರವರಿ 17ರಂದು ಪುತ್ತೂರಿನಲ್ಲಿ ನೋಂದಾಯಿತ ವಿವಾಹವಾಗಿದ್ದರು. ಅನಂತರ ಮಾರ್ಚ್ 19ರಂದು ಕುಕ್ಕುಂದೂರು ದೇವಸ್ಥಾನದಲ್ಲಿ ವೈದಿಕ ವಿಧಿವಿಧಾನಗಳದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ತಿಂಗಳೊಳಗೆ ಅಂದರೆ ಮಾ. 22ರಂದು ಸುದೀಪ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಾ. 29ರಂದು ಸುದೀಪ್ ಸಾವನ್ನಪ್ಪಿದ್ದರು. ಈ ಘಟನೆ ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಸುದೀಪ್ ತಂದೆ ದಾಮೋದರ್ ಕಾರ್ಕಳ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಮೇರೆಗೆ ತನಿಖೆ ನಡೆದಿದ್ದು, ಜೂ. 9ರಂದು ಕಾರ್ಕಳ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಕೆಯಾಗಿದ್ದು ಸೌಮ್ಯ ಶೆಟ್ಟಿ ವಿರುದ್ಧದ ಆರೋಪ ಸಾಬೀತಾಗಿದೆ.

ತಂದೆಯಿಂದ ದೂರು:
ಸುದೀಪ್ ಶೆಟ್ಟಿ ಅವರ ತಂದೆ ದಾಮೋದರ್ ಅವರು ತಮ್ಮ ಸೊಸೆ ಸೌಮ್ಯ ಶೆಟ್ಟಿ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸೌಮ್ಯ ತನ್ನ ಮಗನಿಗೆ ವಿಷವುಣಿಸಿ ಕೊಲೆಗೈದಿದ್ದಾಳೆ. ಆತ ವಿಷ ಸೇವಿಸಿದ ವಿಷಯವನ್ನು ಏಳು ದಿನಗಳ ಕಾಲ ಮುಚ್ಚಿಟ್ಟು ಸರಿಯಾದ ಚಿಕಿತ್ಸೆ ಸಿಗದಂತೆ ಮಾಡಿದ್ದಾಳೆ ಎಂದು ದೂರಿನಲ್ಲಿ ದಾಮೋದರ್ ಉಲ್ಲೇಖಿಸಿದ್ದರು. ಅಲ್ಲದೇ ಸೌಮ್ಯ ಈ ಹಿಂದೆಯೂ ಹಲವರಿಗೆ ವಂಚಿಸಿರುವ ಕುರಿತು ಪೊಲೀಸರಿಗೆ ತಿಳಿಸಿದ್ದರು.
ಸೌಮ್ಯ ಮಾನಸಿಕ ಕಿರುಕುಳ ನೀಡಿ ಸುದೀಪ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದರು.

ಪೊಲೀಸ್ ವಶಕ್ಕೆ:
ತನಿಖೆ ಕೈಗೊಂಡ ಕಾರ್ಕಳ ನಗರ ಠಾಣೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಾಧಾರಗಳನ್ನು ಕಲೆಹಾಕಿದ್ದರು. ಬಳಿಕ ಎ. 11ರಂದು ಸೌಮ್ಯಳನ್ನು ಪೊಲೀಸರು ಉಡುಪಿಯಲ್ಲಿ ವಶಕ್ಕೆ ಪಡೆದಿದ್ದರು. ಪೊಲೀಸ್ ವಶದಲ್ಲಿದ್ದ ಆಕೆಗೆ ಉಡುಪಿ ಸೆಸನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಹೀಗಾಗಿ ಆಕೆಯನ್ನು ಮಂಗಳೂರು ಜಿಲ್ಲಾ ಕಾರಾಗ್ರಹದಲ್ಲಿ ಬಂಧನದಲ್ಲಿರಿಸಲಾಗಿತ್ತು.
ಪತಿಗೆ ಹಿಂಸೆ:
ಮಾ. 17ರಂದು ಸಂಬಂಧಿಕರ ಮನೆಯ ಪೂಜಾ ಕಾರ್ಯಕ್ರಮಕ್ಕೆ ನನ್ನ ಪತ್ನಿ ಹಾಗೂ ಮಗ ಸುದೀಪ್ ಶೆಟ್ಟಿಯೊಂದಿಗೆ ಸೌಮ್ಯ ಶೆಟ್ಟಿ ಬೆಳ್ತಂಗಡಿಯ ಲಾಯಿಲಕ್ಕೆ ಕಾರಿನಲ್ಲಿ ತೆರಳಿದ್ದಳು. ಬೆಳ್ತಂಗಡಿ ತಲುಪುತ್ತಿದ್ದಂತೆ ಸುದೀಪ್ ಶೆಟ್ಟಿ ಜೊತೆ ಜಗಳಕ್ಕಿಳಿದ ಸೌಮ್ಯ ನನ್ನ ಪತ್ನಿಗೂ ಬೈದಿದ್ದಾಳೆ. ಆಕೆಯನ್ನು ಸೌಮ್ಯ ಶೆಟ್ಟಿ ಕಾರಿನಿಂದ ಇಳಿಸಿದ್ದಾಳೆ ಎಂದು ಸುದೀಪ್ ತಂದೆ ದಾಮೋದರ್ ತಿಳಿಸಿದ್ದಾರೆ. ಸೌಮ್ಯ ಶೆಟ್ಟಿಗೆ ಈ ಹಿಂದೆ ಎರಡು ಮದುವೆಯಾಗಿದ್ದು ಆ ಬಳಿಕ ಮತ್ತೊಬ್ಬನ ಜೊತೆಗಿದ್ದಳು. ಇದೆಲ್ಲ ತಿಳಿಯದೇ ಸುದೀಪ್ ಮದುವೆಯಾಗಿದ್ದನು. ಈ ವಿಚಾರ ನಮಗೆ ಗೊತ್ತಿರಲಿಲ್ಲ. ಫೆ. 6ರಂದು ಬಂಗಾಡಿ ಸಮೀಪದ ಕುತ್ತೊಟ್ಟು ದೇವಸ್ಥಾನದಲ್ಲಿ ಮದುವೆಯಾಗಿರುವುದಾಗಿ ಮದುವೆ ನೋಂದಾವಣೆ ಸಂದರ್ಭ ಉಲ್ಲೇಖಿಸಿದ್ದಳು ಎಂದಿರುವ ದಾಮೋದರ್ ಅವರು ಸುದೀಪ್ಗೆ ಸೌಮ್ಯ ಶೆಟ್ಟಿ ಸಾಕಷ್ಟು ಹಿಂಸೆ ನೀಡಿರುತ್ತಾಳೆ ಎಂದು ಅವರು ಮಾಧ್ಯಮಗಳಲ್ಲಿ ನೋವನ್ನು ತೋಡಿಕೊಂಡಿದ್ದಾರೆ.


