ಸುಳ್ಯ : ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗೂನಡ್ಕ ಪರಿಸರದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ನಿನ್ನೆ ತಡರಾತ್ರಿ 8 ರಿಂದ 10 ಕಾಡಾನೆಗಳ ಬೃಹತ್ ಹಿಂಡು ಕೃಷಿ ತೋಟಗಳಿಗೆ ನುಗ್ಗಿ ಭಾರಿ ಪ್ರಮಾಣದ ಬೆಳೆ ಹಾನಿ ಮಾಡಿದೆ. ಆನೆಗಳು ನುಗ್ಗದಂತೆ ತಡೆಯಲು ರೈತರು ನಡೆಸಿದ ಗಂಭೀರ ಪ್ರಯತ್ನಗಳು ಸಂಪೂರ್ಣ ವಿಫಲವಾಗಿವೆ.


ನಿನ್ನೆ ತಡರಾತ್ರಿ ಅರಣ್ಯ ಗಡಿಯಿಂದ ಹೊರಬಂದ ಕಾಡಾನೆಗಳ ಹಿಂಡು ಏಕಾಏಕಿ ಕೃಷಿ ತೋಟಗಳತ್ತ ಹೆಜ್ಜೆ ಇಟ್ಟಿದೆ. ಇದನ್ನು ಗಮಿನಿಸಿದ ಸ್ಥಳೀಯ ಕೃಷಿಕರು ಹಾಗೂ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ತಕ್ಷಣವೇ ಜಂಟಿಯಾಗಿ ಕಾರ್ಯಾಚರಣೆಗಿಳಿದ ರೈತರು, ಆನೆಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ ಅವುಗಳ ಸನಿಹದಲ್ಲೇ ಪಟಾಕಿಗಳನ್ನು ಸಿಡಿಸಿದ್ದಾರೆ. ಅಲ್ಲದೆ, ಜೋರಾಗಿ ಬೊಬ್ಬೆ ಹೊಡೆದು ಶಬ್ದ ಮಾಡುವ ಮೂಲಕ ಕಾಡಿನತ್ತ ಓಡಿಸಲು ಶ್ರಮಿಸಿದ್ದಾರೆ. ಆದರೆ, ಯಾವುದಕ್ಕೂ ಕ್ಯಾರೇ ಅನ್ನದ ಕಾಡಾನೆಗಳು ನೇರವಾಗಿ ತೋಟಗಳೊಳಗೆ ನುಗ್ಗಿವೆ ಗ್ರಾಮಸ್ಥರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ನೀಡಿದ್ದಾರೆ. ಆನೆಗಳನ್ನು ಮತ್ತೆ ಅರಣ್ಯದತ್ತ ಓಡಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.



