ವಾಷಿಂಗ್ಟನ್/ಟೆಹ್ರಾನ್ : ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಪರಿಸ್ಥಿತಿ ಮತ್ತೆ ಯುದ್ಧದ ಭೀತಿ ಎದುರಾಗಿದೆ. ಮಂಗಳವಾರ ರಾತ್ರಿ ಇರಾನ್ ಸೇನೆಯು ಕುವೈತ್ ಮತ್ತು ಬಹ್ರೇನ್ನಲ್ಲಿರುವ ಅಮೆರಿಕದ ಪ್ರಮುಖ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಿಢೀರ್ ಕ್ಷಿಪಣಿ ದಾಳಿ ನಡೆಸಿದ್ದು, ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ ಗರಿಷ್ಠ ಮಟ್ಟ ತಲುಪಿದೆ. ಈ ದಾಳಿಗೆ ಪ್ರತಿಯಾಗಿ ಅಮೆರಿಕ ವಾಯುಪಡೆಯು ಬುಧವಾರ ಮುಂಜಾನೆ ಇರಾನ್ನ ಕೆಶ್ಮ್ ದ್ವೀಪದ ಮೇಲೆ ಭೀಕರ ಪ್ರತಿದಾಳಿ ನಡೆಸುವ ಮೂಲಕ ಯುದ್ಧದ ಎಚ್ಚರಿಕೆ ನೀಡಿದೆ.


ಇರಾನ್ ಕ್ಷಿಪಣಿಗಳನ್ನು ಉಡಾಯಿಸಿದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಯುನೈಟೆಡ್ ಸ್ಟೇಟ್ಸ್ ಸೇನೆಯು ಇರಾನ್ನ ಕೆಶ್ಮ್ ದ್ವೀಪದ ಮೇಲೆ ತಡರಾತ್ರಿ ‘ಸ್ವಯಂ ರಕ್ಷಣಾ ದಾಳಿ’ (Self-Defense Strike) ನಡೆಸಿರುವುದಾಗಿ ಬುಧವಾರ ಮುಂಜಾನೆ ಅಧಿಕೃತವಾಗಿ ಘೋಷಿಸಿದೆ. ಕೊಲ್ಲಿ ಪ್ರದೇಶದಲ್ಲಿ ಇರಾನ್ ನಡೆಸಿದ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ಅಮೆರಿಕದ ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ ಎಂದು ಯುಎಸ್ ಮಿಲಿಟರಿ ಹೇಳಿಕೊಂಡಿದೆ.

ಬಹ್ರೇನ್ನಲ್ಲಿರುವ ಅಮೆರಿಕ ನೌಕಾಪಡೆಯ ಅತ್ಯಂತ ಪ್ರಮುಖ ‘ಐದನೇ ನೌಕಾಪಡೆ ಪ್ರಧಾನ ಕಚೇರಿ’ (US 5th Fleet HQ) ಹಾಗೂ ಮತ್ತೊಂದು ವಾಯುನೆಲೆಯನ್ನು ಸಂಪೂರ್ಣ ಧ್ವಂಸಗೊಳಿಸಲಾಗಿದೆ ಎಂಬ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ (IRGC) ಹೇಳಿಕೆಯನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಕಡ್ಡಾಯವಾಗಿ ನಿರಾಕರಿಸಿದೆ. ಕೊಲ್ಲಿ ರಾಷ್ಟ್ರಗಳ ಹಲವೆಡೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿರುವುದು ನಿಜ, ಆದರೆ ಅಮೆರಿಕದ ಅತ್ಯಾಧುನಿಕ ರಕ್ಷಣಾ ಪಡೆಗಳು ಅವೆಲ್ಲವನ್ನೂ ತಡೆಗಟ್ಟಿದೆ ಎಂದು ಸೆಂಟ್ಕಾಮ್ ಸ್ಪಷ್ಟಪಡಿಸಿದೆ.

ಅಮೆರಿಕ ಸೇನೆಯ ವರದಿಯ ಪ್ರಕಾರ, ಕುವೈತ್ನ ಸೇನಾ ನೆಲೆಯನ್ನು ಗುರಿಯಾಗಿಸಿ ಇರಾನ್ ಹಾರಿಸಿದ್ದ ಎರಡು ಕ್ಷಿಪಣಿಗಳು ತಾಂತ್ರಿಕ ದೋಷದಿಂದ ಮಾರ್ಗಮಧ್ಯದಲ್ಲೇ ವಿಫಲವಾಗಿ ಬಿದ್ದಿವೆ. ಇನ್ನು ಬಹ್ರೇನ್ನತ್ತ ನುಗ್ಗಿ ಬಂದ ಮೂರು ಪ್ರಬಲ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಯುಎಸ್ ಮತ್ತು ಬಹ್ರೇನ್ ಜಂಟಿ ವಾಯು ರಕ್ಷಣಾ ಪಡೆಗಳು ಆಕಾಶದಲ್ಲೇ ಹೊಡೆದುರುಳಿಸಿವೆ. ಇದರೊಂದಿಗೆ ಇರಾನ್ ರವಾನಿಸಿದ್ದ ಮೂರು ಅಪಾಯಕಾರಿ ಸುಸೈಡ್ ಡ್ರೋನ್ಗಳನ್ನು ಸಹ ಅಮೆರಿಕ ಸೇನೆ ಹೊಡೆದುರುಳಿಸಿದೆ. ಇತ್ತ ಇರಾನ್ ಕೂಡ ತನ್ನ ವಾಯುನೆಲೆಗಳು ಅಲರ್ಟ್ ಆಗಿದ್ದು, ಶತ್ರುಗಳ ಕ್ಷಿಪಣಿಗಳನ್ನು ತಡೆಹಿಡಿಯುತ್ತಿರುವುದಾಗಿ ಪ್ರಕಟಿಸಿದೆ.
ಈ ಭೀಕರ ದಾಳಿ-ಪ್ರತಿದಾಳಿಯ ಬೆನ್ನಲ್ಲೇ ಅಮೆರಿಕವು ಇರಾನ್ಗೆ ಗಂಭೀರ ಎಚ್ಚರಿಕೆಯನ್ನು ರವಾನಿಸಿದೆ. “ಇರಾನ್ ಯಾವುದೇ ಕಾರಣಕ್ಕೂ ಅಣ್ವಸ್ತ್ರ ಹೊಂದಲು ಅವಕಾಶ ನೀಡುವುದಿಲ್ಲ. ಪ್ರಸ್ತುತ ನಡೆಯುತ್ತಿರುವ ಜಾಗತಿಕ ಶಾಂತಿ ಮಾತುಕತೆಗಳು ಒಂದು ವೇಳೆ ವಿಫಲವಾದರೆ, ಇರಾನ್ ಮೇಲಿನ ಪೂರ್ಣ ಪ್ರಮಾಣದ ಮಿಲಿಟರಿ ದಾಳಿ ಖಚಿತ” ಎಂದು ಅಮೆರಿಕ ಖಡಕ್ ಆಗಿ ಹೇಳಿದೆ. ಇದರಿಂದಾಗಿ ಇಡೀ ಗಲ್ಫ್ ವಲಯದಲ್ಲಿ ಸದ್ಯ ಯುದ್ಧದ ಭೀತಿ ಆವರಿಸಿದೆ.


