ಬೆಳ್ತಂಗಡಿ: ಪೆರ್ನೆ ನಿವಾಸಿ ಯತೀಶ್ ಹತ್ಯೆ ಪ್ರಕರಣ ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

Prakhara News
1 Min Read

ಬೆಳ್ತಂಗಡಿ: ಗುರುವಾಯನಕೆರೆ ಸಮೀಪದ ಅಲಾದಿಕೊಟ್ಟಿಗೆಯಲ್ಲಿ ಪತ್ತೆಯಾದ ಅಪರಿಚಿತ ಮೃತದೇಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಂಟ್ವಾಳ ಪೆರ್ನೆ ನಿವಾಸಿ ನಿತಿನ್ (34) ಅವರು ನೀಡಿದ ದೂರಿನ ಪ್ರಕಾರ, ಸೋಮವಾರ ಬೆಳಿಗ್ಗೆ ವಾಟ್ಸಾಪ್ ಮೂಲಕ ಅಲಾದಿಕೊಟ್ಟಿಗೆಯಲ್ಲಿ ಅಪರಿಚಿತ ಮೃತದೇಹವೊಂದು ಇರುವ ಕುರಿತು ಭಾವಚಿತ್ರ ಸಹಿತ ಮಾಹಿತಿ ಬಂದಿತ್ತು. ಚಿತ್ರವನ್ನು ಪರಿಶೀಲಿಸಿದ ವೇಳೆ ಮೃತ ವ್ಯಕ್ತಿ ತಮ್ಮ ಸಹೋದರ ಯತೀಶ (33) ಎಂದು ಗುರುತಿಸಲಾಗಿದೆ.

ನಂತರ ಘಟನಾ ಸ್ಥಳಕ್ಕೆ ತೆರಳಿದ ನಿತಿನ್, ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಜೂನ್ 1ರ ಬೆಳಗಿನ ವೇಳೆಯಲ್ಲಿ ಯತೀಶ ಅವರ ಮೇಲೆ ಬೆಳ್ತಂಗಡಿ ಮಿತ್ತಬಾಗಿಲು ನಿವಾಸಿ ಯಶೋಧರ (35), ಕಡಬ ಚಾರ್ವಾಕ ನಿವಾಸಿ ಮೋಹನ್ (30) ಹಾಗೂ ಬೆಳ್ತಂಗಡಿ ಪದಂಗಡಿ ನಿವಾಸಿ ಇಬ್ರಾಹಿಂ (54) ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳ ಹಲ್ಲೆಯಿಂದ ಯತೀಶ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 65/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 115(2), 103 ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment