ನವದೆಹಲಿ: ವಾಹನ ಸವಾರರಿಗೆ ಮತ್ತೆ ಶಾಕ್ ಎದುರಾಗಿದೆ. ಎರಡೇ ವಾರದಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲಾಗಿದೆ. ಸೋಮವಾರ (ಮೇ 25) ಪೆಟ್ರೋಲ್ 2.61 ರೂ. ಮತ್ತು ಡೀಸೆಲ್ 2.71 ರೂ. ಏರಿಕೆಯಾಗಿದೆ.


ಮೇ 15 ರಿಂದ ದರ ಪರಿಷ್ಕರಣೆ ಪುನರಾರಂಭವಾದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಒಟ್ಟು ಸುಮಾರು 7.5 ರೂ. ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ರೂಪಾಯಿ ಮೌಲ್ಯ ಕುಸಿತದಿಂದ ತೈಲ ಮಾರುಕಟ್ಟೆ ಕಂಪನಿಗಳ ಆಮದು ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಈ ದರ ಏರಿಕೆ ಮಾಡಲಾಗಿದೆ. ಈ ಕುರಿತು ಮಾತನಾಡಿರುವ ಸರ್ಕಾರಿ ಸ್ವಾಮ್ಯದ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೆಷನ್ ಲಿಮಿಟೆಡ್ ಅಧಿಕಾರಿಗಳು, ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಜಾಗತಿಕ ಕಚ್ಚಾ ತೈಲ ದರ ಏರಿಕೆ ಹಾಗೂ ತೈಲ ಕಂಪನಿಗಳ ನಷ್ಟವೇ ಇಂಧನ ದರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ಹಲವು ತಿಂಗಳುಗಳಿಂದ ಉಂಟಾಗಿರುವ ತಡೆ ಮತ್ತು ವ್ಯತ್ಯಯಗಳಿಂದ ಜಾಗತಿಕ ಇಂಧನ ಸಾಗಣೆ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚಿದ್ದು, ಮಧ್ಯಪ್ರಾಚ್ಯದಿಂದ ತೈಲ ಮತ್ತು ಅನಿಲವನ್ನು ಆಮದು ಮಾಡುವ ದೇಶಗಳ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಸಂಘರ್ಷದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 65-70 ಡಾಲರ್ನಿಂದ 110-115 ಡಾಲರ್ಗೆ ಏರಿಕೆಯಾಗಿದೆ. ಭಾರತ ತನ್ನ ಅಗತ್ಯದ ಸುಮಾರು ಶೇಕಡಾ 85 ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಆರ್ಥಿಕತೆಯ ಮೇಲೆ ಪರಿಣಾಮ ಹೆಚ್ಚಾಗಿದೆ ಎನ್ನಲಾಗಿದೆ



