ಮಂಗಳೂರು : ಮಂಗಳಾದೇವಿ ನವರಾತ್ರಿ ಉತ್ಸವದಲ್ಲಿ ಅನ್ಯಧರ್ಮಿಯ ವ್ಯಾಪಾರಿಗಳಿಗೆ ಅನ್ಯಾಯವಾಗಿರುವ ವಿಚಾರದಲ್ಲಿ ಮಧ್ಯಪ್ರವೇಶಿಸಿರುವ ಜಿಲ್ಲಾಡಳಿತ ಏಲಂ ಆಗದೇ ಉಳಿದಿರುವ ಇತರ ಮಳಿಗೆಗಳಿಗೆ ಇಂದು ಬೆಳಗ್ಗೆ ಬಹಿರಂಗ ಹರಾಜು ಮಾಡುವಂತೆ ದೇವಸ್ಥಾನ ಆಡಳಿತ ಮಂಡಳಿಗೆ ಸೂಚಿಸಿದ್ದು ಇದೀಗ ವಿವಾದ ಸೃಷ್ಟಿಸಿದ್ದುಮುಂದೆ ನಡೆಯುವ ಅನಾಹುತಾಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ವಿಹೆಚ್‌ಪಿ ಎಚ್ಚರಿಸಿದೆ.
ಬೀದಿಬದಿ ಮತ್ತು ಜಾತ್ರೆ ವ್ಯಾಪಾರಸ್ಥರ ಸಂಘದ ಪ್ರಮುಖರು ದಕ್ಷಿಣ ಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿ ಜಿ.ಸಂತೋಷ್ ಕುಮಾರ್ ಅವರಿಗೆ ತಮಗಾಗಿರುವ ಅನ್ಯಾಯದ ಬಗ್ಗೆ ಮನವಿ ಸಲ್ಲಿಸಿದ್ದರು. ದೇವಸ್ಥಾನ ಆಡಳಿತ ಮಂಡಳಿಯನ್ನು ಕರೆಸಿದ ಅಪರ ಜಿಲ್ಲಾಧಿಕಾರಿಗಳು ಏಲಂ ಆಗದೇ ಉಳಿದಿರುವ ಮಳಿಗೆಗಳಿಗೆ ಇಂದು ಬೆಳಿಗ್ಗೆ ಬಹಿರಂಗ ಹರಾಜು ಮಾಡುವಂತೆ ಸೂಚಿಸಿದ್ದಾರೆ.
ಮರು ಏಲಂ ನಡೆದಲ್ಲಿ ಅನಾಹುತಕ್ಕೆ ಜಿಲ್ಲಾಡಳಿತ ಹೊಣೆ : VHP
ವ್ಯಾಪಾರ ಮಳಿಗೆಗೆ ಮರು ಏಲಂ ನಡೆಸಿದಲ್ಲಿ ಅಥವಾ ಹೆಚ್ಚುವರಿ ಅಂಗಡಿ ನೀಡಿದಲ್ಲಿ ಮುಂದೆ ನಡೆಯುವ ಅನಾಹುತಕ್ಕೆ ಜಿಲ್ಲಾಡಳಿತ ಹೊಣೆ ಎಂದು ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಿಹೆಚ್‌ಪಿ ಇತಿಹಾಸ ಪ್ರಸಿದ್ಧ ಮಂಗಳಾದೇವಿ ದೇವಸ್ಥಾನದಲ್ಲಿ ಪ್ರತೀ ವರ್ಷ ನಡೆಯುವ ಜಾತ್ರಾ ಸಂಧರ್ಭದಲ್ಲಿ, ದೇವಸ್ಥಾನ ಮುಂಭಾಗ ರಸ್ತೆಯ ಎರಡು ಬದಿಯಲ್ಲಿ ಸಂತೆ ವ್ಯಾಪಾರಕ್ಕೆ ಅಂಗಡಿಗಳನ್ನು ನೂರಾರು ವರ್ಷಗಳಿಂದ ದೇವಸ್ಥಾನವೇ ಏಲಂ ಮೂಲಕ ವ್ಯಾಪಾರಸ್ಥರಿಗೆ ನೀಡಿಕೊಂಡು ಬರುವ ಸಂಪ್ರದಾಯ. ಈ ಬಾರಿಯೂ ಕೂಡ ಏಲಂ ನಡೆದು ಸುಮಾರು 80 ವ್ಯಾಪಾರಸ್ಥರು ಅಂಗಡಿ ಪಡೆದಿರುತ್ತಾರೆ. ಆದರೆ ಇವತ್ತು ಬೀದಿ ಬದಿ ವ್ಯಾಪಾರಸ್ಥರ ಸಂಘ ಮರು ಏಲಂ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ. ಇದನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಖಂಡಿಸುತ್ತದೆ.
ಸಂಪ್ರದಾಯ ಮುರಿದು ಮರು ಏಲಂ ನಡೆಸದಂತೆ ಹಾಗು ಹೆಚ್ಚುವರಿ ಅಂಗಡಿ ನೀಡದಂತೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮನವಿ ಮಾಡುತ್ತದೆ. ಒಂದು ವೇಳೆ ಸಂಪ್ರದಾಯ ಮುರಿದು ಮರು ಏಲಂ ನಡೆಸಿ ಅಥವಾ ಹೆಚ್ಚುವರಿ ಅಂಗಡಿ ನೀಡಿದಲ್ಲಿ ಮುಂದೆ ನಡೆಯುವ ಅನಾಹುತಕ್ಕೆ ಜಿಲ್ಲಾಡಳಿತ ಹೊಣೆ ಎಂದು ಎಚ್ಚರಿಸುತ್ತದೆ ಎಂದು ವಿಹಿಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ತಿಳಿಸಿದ್ದಾರೆ.