ಜನಸಾಮಾನ್ಯರಿಗೆ ಇಂಧನ ಏರಿಕೆಯ ಬರೆ: 10 ದಿನಗಳಲ್ಲಿ 3ನೇ ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ!

Prakhara News
2 Min Read

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಗಗನಕ್ಕೇರುತ್ತಿರುವ ಬೆನ್ನಲ್ಲೇ, ದೇಶೀಯ ಮಾರುಕಟ್ಟೆಯಲ್ಲಿ ತೈಲ ಕಂಪನಿಗಳು ಗ್ರಾಹಕರಿಗೆ ಸತತವಾಗಿ ಬೆಲೆ ಏರಿಕೆಯ ಬರೆ ಎಳೆಯುತ್ತಿವೆ. ಕಳೆದ ಹತ್ತು ದಿನಗಳ ಅವಧಿಯಲ್ಲಿ ಇದೀಗ ಮೂರನೇ ಬಾರಿಗೆ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಹೆಚ್ಚಳ ಮಾಡಲಾಗಿದ್ದು, ಜನಸಾಮಾನ್ಯರ ಮಾಸಿಕ ಬಜೆಟ್ ಸಂಪೂರ್ಣ ಏರುಪೇರಾಗಿದೆ.

ಶನಿವಾರದ ತೈಲ ಕಂಪನಿಗಳ ನಿರ್ಧಾರದಂತೆ ಪೆಟ್ರೋಲ್ ಬೆಲೆ ಲೀಟರ್‌ಗೆ 87 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 91 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 107.14 ರೂ. ಆಗಿದ್ದು ಡೀಸೆಲ್ ಬೆಲೆ 95.04 ರೂ. ಆಗಿದೆ.

ಮೇ ತಿಂಗಳಲ್ಲಿ ಮೂರನೇ ಬಾರಿ ಏರಿಕೆ: ಇತ್ತೀಚಿನ ದಿನಗಳಲ್ಲಿ ತೈಲ ಕಂಪನಿಗಳು ಗ್ರಾಹಕರ ಮೇಲೆ ಸತತವಾಗಿ ಇಂಧನ ಹೊರೆಯನ್ನು ಹಾಕುತ್ತಿವೆ. ಈ ವಾರದ ಆರಂಭದಲ್ಲಷ್ಟೇ ಲೀಟರ್ ಇಂಧನಕ್ಕೆ 90 ಪೈಸೆ ಹೆಚ್ಚಿಸಲಾಗಿತ್ತು. ಅದಕ್ಕೂ ಮೊದಲು ತೈಲ ಮಾರುಕಟ್ಟೆ ಕಂಪನಿಗಳು (OMCs) ಪ್ರತಿ ಲೀಟರ್‌ಗೆ ಒಮ್ಮೆಗೆ ಸುಮಾರು 3 ರೂ.ಗಳಷ್ಟು ದರಗಳನ್ನು ಹೆಚ್ಚಿಸುವ ಮೂಲಕ ದೀರ್ಘಾವಧಿಯ ಬೆಲೆ ಸ್ಥಿರತೆಗೆ ಬ್ರೇಕ್ ಹಾಕಿದ್ದವು. ಇತ್ತೀಚಿನ ಈ ಪರಿಷ್ಕರಣೆಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 97.77 ರೂ.ಗಳಿಂದ 98.64 ರೂ.ಗಳಿಗೆ ತಲುಪಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 87 ಪೈಸೆ ಏರಿಕೆಯಾಗಿ, 98.64 ರೂ.ಗಳಿಂದ 99.51 ರೂ.ಗಳಿಗೆ ತಲುಪಿದೆ. ಡೀಸೆಲ್ ಬೆಲೆ ಲೀಟರ್‌ಗೆ 91 ಪೈಸೆ ಏರಿಕೆಯಾಗಿ 91.58 ರೂ.ಗಳಿಂದ 92.49 ರೂ.ಗಳಿಗೆ ತಲುಪಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 110.57 ರೂ. ಡೀಸೆಲ್ 96.04 ರೂ. ಆಗಿದೆ. ಮುಂಬೈನಲ್ಲಿ ಪೆಟ್ರೋಲ್ 107.56 ರೂ. ಡೀಸೆಲ್, 94.05 ರೂ.ಚೆನ್ನೈನಲ್ಲಿ ಪೆಟ್ರೋಲ್ 104.54 ರೂ. ಡೀಸೆಲ್ 96.16 ರೂ. ಆಗಿದೆ.

ಅಸಲಿ ಕಾರಣವೇನು? ಮಧ್ಯಪ್ರಾಚ್ಯದಲ್ಲಿ ತಲೆದೂರಿರುವ ಯುದ್ಧದ ವಾತಾವರಣ ಮತ್ತು ಯುಎಸ್-ಇರಾನ್ ನಡುವಿನ ಶಾಂತಿ ಮಾತುಕತೆಗಳ ಸುತ್ತಲಿನ ಅನಿಶ್ಚಿತತೆಯೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರ ಏರಿಳಿತ ಕಾಣುತ್ತಿವೆ. ಶುಕ್ರವಾರ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 104 ಡಾಲರ್‌ಗಿಂತ (USD) ಹೆಚ್ಚಾಗಿದ್ದರೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 97 ಡಾಲರ್ ಆಸುಪಾಸಿನಲ್ಲಿ ವಹಿವಾಟು ನಡೆಸಿದೆ. ಜಾಗತಿಕ ಪೂರೈಕೆಯ ಕಳವಳಗಳ ಮಧ್ಯೆ ಒಂದು ಹಂತದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ಬರೋಬ್ಬರಿ 111 ಡಾಲರ್‌ಗೆ ತಲುಪಿತ್ತು.

ತೈಲ ಕಂಪನಿಗಳಿಗೆ ಭಾರಿ ನಷ್ಟ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಸತತವಾಗಿ ಏರುತ್ತಿದ್ದರೂ, ಭಾರತದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ತಿಂಗಳುಗಳಿಂದ ದೇಶೀಯ ಇಂಧನ ಬೆಲೆಗಳನ್ನು ಬದಲಾಯಿಸದೆ ಗ್ರಾಹಕರಿಗೆ ನೆರವಾಗಿದ್ದವು. ಆದರೆ, ಈ ಅವಧಿಯಲ್ಲಿ ಸಾರ್ವಜನಿಕ ವಲಯದ ತೈಲ ಕಂಪನಿಗಳು ಪ್ರತಿ ತಿಂಗಳು ಸುಮಾರು 1,000 ಕೋಟಿ ರೂ.ಗಳಷ್ಟು ಭಾರಿ ನಷ್ಟವನ್ನು ಅನುಭವಿಸುತ್ತಿದ್ದವು. ಹೀಗಾಗಿ ನಷ್ಟದ ಹೊರೆಯನ್ನು ತಗ್ಗಿಸಲು ಈಗ ಬೆಲೆ ಪರಿಷ್ಕರಣೆಯ ಮೂಲಕ ಆ ಹೊರೆಯ ಒಂದು ಭಾಗವನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಕಂಪನಿಗಳು ಆರಂಭಿಸಿವೆ.

ಸತತ ಡೀಸೆಲ್ ದರ ಏರಿಕೆಯಿಂದಾಗಿ ಲಾರಿ, ಟೆಂಪೋ ಸೇರಿದಂತೆ ವಾಣಿಜ್ಯ ಸಾರಿಗೆ ವೆಚ್ಚ ಹೆಚ್ಚಾಗಲಿದ್ದು, ಇದು ಮುಂದಿನ ದಿನಗಳಲ್ಲಿ ತರಕಾರಿ, ಹಾಲು ಹಾಗೂ ಅತ್ಯಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಲಿದೆ ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

Share This Article
Leave a Comment