ಹಾಸನ: ಹಾಸನದಲ್ಲಿ ಇತ್ತೀಚೆಗೆ ನಡೆದಿದ್ದ ಭೀಕರ ಹಲ್ಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ. ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಾಫ್ಟ್ವೇರ್ ಇಂಜಿನಿಯರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ವರುಣ್ (27) ಎಂಬಾತನನ್ನು ಬಡಾವಣೆ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.


ಏನಿದು ಘಟನೆ?
ಮೇ 12ರ ಸಂಜೆ ಹಾಸನದ ಕೆ.ಆರ್. ಪುರಂ ಬಡಾವಣೆಯ ಪ್ರಸಿದ್ಧ ‘ಎಂಜೆ ಜಿಮ್’ನಲ್ಲಿ ಈ ರಕ್ತಸಿಕ್ತ ಘಟನೆ ನಡೆದಿತ್ತು. ಎಂದಿನಂತೆ ಸಾಫ್ಟ್ವೇರ್ ಇಂಜಿನಿಯರ್ ಕೀರ್ತನ್ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಹಾಸನದ ಚನ್ನಪಟ್ಟಣ ಬಡಾವಣೆಯ ನಿವಾಸಿ ವರುಣ್, ಸಣ್ಣ ವಿಚಾರಕ್ಕೆ ಗಲಾಟೆ ತೆಗೆದು ಕೀರ್ತನ್ ಮೇಲೆ ಏಕಾಏಕಿ ಮುಗಿಬಿದ್ದಿದ್ದಾನೆ.

ಮುಖದ ಮೂಳೆ ಮುರಿಯುವಂತೆ ಪಂಚ್!
ಕೋಪೋದ್ರಿಕ್ತನಾದ ಆರೋಪಿ ವರುಣ್, ಟೆಕ್ಕಿ ಕೀರ್ತನ್ ತಲೆ ಹಾಗೂ ಮುಖಕ್ಕೆ ಮನಸೋಇಚ್ಛೆ ಪಂಚ್ ಮಾಡಿದ್ದಾನೆ. ಹಲ್ಲೆಯ ತೀವ್ರತೆಗೆ ಕೀರ್ತನ್ ಅವರ ಮುಖದ ಮೂಳೆ ಮುರಿದಿದ್ದು, ತೀವ್ರ ರಕ್ತಸ್ರಾವವಾಗಿ ಜಿಮ್ನಲ್ಲೇ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಲ್ಲಿ ಅವಿತಿದ್ದ ಕಿರಾತಕ ಅರೆಸ್ಟ್:
ಹಲ್ಲೆ ನಡೆಸಿದ ತಕ್ಷಣ ಆರೋಪಿ ವರುಣ್ ಸ್ಥಳದಿಂದ ಎಸ್ಕೇಪ್ ಆಗಿದ್ದನು. ಈ ಸಂಬಂಧ ಹಾಸನದ ಬಡಾವಣೆ ಠಾಣೆ ಪೊಲೀಸರು ಕೊಲೆ ಯತ್ನ (Attempt to Murder) ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದರು. ಪೊಲೀಸರ ಕಣ್ಣು ತಪ್ಪಿಸಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ವರುಣ್ನನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಮ್ನಂತಹ ಸಾರ್ವಜನಿಕ ಸ್ಥಳದಲ್ಲಿ ಇಂತಹದೊಂದು ಡೆಡ್ಲಿ ಅಟ್ಯಾಕ್ ನಡೆದಿರುವುದು ಸ್ಥಳೀಯರಲ್ಲಿ ಹಾಗೂ ಜಿಮ್ ಪ್ರಿಯರಲ್ಲಿ ಆತಂಕ ಮೂಡಿಸಿದೆ. ಸದ್ಯ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ


