ವಿಟ್ಲ: ಯುವಕ ಮಂಡಲ (ರಿ) ವಿಟ್ಲ ಇವರು ಆಯೋಜಿಸಿದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ “ಅಮ್ಮ ಕಲಾವಿದೆರ್ ಕುಡ್ಲ” ಅಭಿನಯದ ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ, ಕುಸಲ್ದರಸೆ ನವೀನ್ ಡಿ. ಪಡೀಲ್ ಸಲಹೆ ಸಹಕಾರದೊಂದಿಗೆ , ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚನೆಯ,ರಂಗ್ ದ ರಾಜೆ ಸುಂದರ್ ರೈ ಮಂದಾರ ನಿರ್ದೇಶನದ ಈ ವರ್ಷದ ಹೊಸ ನಾಟಕ “ಅಮ್ಮೆರ್” ದ್ವಿತೀಯ ಪ್ರದರ್ಶನ ಸೆಪ್ಟಂಬರ್ 9 ರಂದು ನಡೆಯಿತು.
ಬಿರುಸಿನ ಮಳೆಯ ನಡುವೆಯೂ ಪ್ರೇಕ್ಷಕರಿಂದ ಭರ್ತಿಯಾದ ವಿಟ್ಲ ಶಾಲಾ ಮೈದಾನದಲ್ಲಿ ನಾಟಕ ಪ್ರದರ್ಶನ ನಡೆದಿದ್ದು ನಾಟಕದ ಕಥೆ ಹಾಗೂ ಹಾಸ್ಯ ಜನರ ಪ್ರಶಂಸೆಗೆ ಪಾತ್ರವಾಯಿತು. ಹಲವಾರು ಹಿಟ್ ನಾಟಕ ರಚನೆ ಮಾಡಿರುವ ಸೋಮನಾಥ ಶೆಟ್ಟಿ ಮಂಗಲ್ಪಾಡಿಯವರ “ಅಮ್ಮೆರ್” ನಾಟಕದ ಕಥೆ ಅವರ ಹಿಂದಿನ ನಾಟಕಗಳಿಗಿಂತ ವಿಭಿನ್ನವಾಗಿದ್ದು ಕ್ಲೈಮ್ಯಾಕ್ಸ್ ನ ಟ್ವಿಸ್ಟ್ ಜನರಿಗೆ ಇಷ್ಟವಾಗುತ್ತದೆ.
ಉಳಿದಂತೆ ಹಾಸ್ಯ ದಿಗ್ಗಜರಾದ ದೀಪಕ್ ರೈ ಪಾಣಾಜೆಯವರ ಅಜ್ಜಿಯ ಪಾತ್ರ, ಅರುಣ್ ಬಿ ಸಿ ರೋಡ್ , ನಿತಿನ್ ಹೊಸಂಗಡಿ, ರಂಜನ್ ಬೋಳೂರು ಅವರ ಕಾಂಬಿನೇಷನ್ ಜನರಿಗೆ ಹಾಸ್ಯದ ಕಡಲಲ್ಲಿ ತೇಲಾಡಿಸುತ್ತದೆ.ನಾಟಕದಲ್ಲಿ ಬರುವ ಆನೆಯ ಪಾತ್ರವನ್ನು ಅಂತೂ ಮರೆಯುವಂತಿಲ್ಲ ಇದೊಂದು ಹೊಸ ಪ್ರಯೋಗವಾಗಿದೆ.ಮಂಜುಳಾ ಜನಾರ್ಧನ, ಶಿವಾನಂದ ಶೆಟ್ಟಿ ಮಂಗಲ್ಪಾಡಿ,ರವಿ ಎಂ ಎಸ್ ವರ್ಕಾಡಿ, ಜಗನ್ನಿವಾಸ ಶೆಟ್ಟಿ,ಸೋಮನಾಥ ಶೆಟ್ಟಿ, ಸುರೇಶ್ ಸರಪಾಡಿ,ಮಾಲಾಶ್ರೀ ಶೆಟ್ಟಿ, ಪವಿತ್ರ ಅಂಚನ್ ರಾಮಕುಂಜ, ಜೂನಿಯರ್ ಬೋಳಾರ್ ನೇಮಿರಾಜ್ ಪೋಷಕ ಪಾತ್ರದಲ್ಲಿ ನಟಿಸಿದ್ದು ನೀಡಿರುವ ಪಾತ್ರಗಳಿಗೆ ತಕ್ಕಂತೆ ನ್ಯಾಯ ಒದಗಿಸಿದ್ದಾರೆ.
ರವಿ ಸುಂಕದಕಟ್ಟೆ ಯವರ ಸಂಗೀತ ನಾಟಕದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದ್ದು ತಾಂತ್ರಿಕ ನಿರ್ದೇಶನದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.ನಾಟಕದ ಹೆಸರಿಗೆ ತಕ್ಕಂತೆ ಈ ಕಥೆಯ ನಾಯಕ ಅಮ್ಮೆರ್ ಪಾತ್ರವನ್ನು ಸುಂದರ್ ರೈ ಮಂದಾರ ವಹಿಸಿಕೊಂಡಿದ್ದು ಹಾಸ್ಯಕ್ಕೂ ಸೈ ಟ್ರಾಜಿಡಿಗೂ ಸೈ ಎಂಬಂತೆ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಮನೋಜ್ಞ ಅಭಿನಯದಿಂದ ಜನರ ಮನಸನ್ನು ಗೆಲ್ಲುತ್ತಾರೆ. ಕಥೆಯಲ್ಲಿ ರೇಬಿಸ್ ಖಾಯಿಲೆಯ ಬಗ್ಗೆ ಜನರಿಗೆ ಒಂದು ಉತ್ತಮ ಸಂದೇಶ ನೀಡಿದ್ದು ನಾಟಕದ ಟ್ರಾಜಿಡಿ ಎಂಡಿಂಗ್ ಜನರ ಕಣ್ಣಲ್ಲಿ ನೀರು ತರಿಸುತ್ತದೆ. ನವಿರಾದ ಹಾಸ್ಯದೊಂದಿಗೆ ಒಂದು ಉತ್ತಮ ಸಂಸಾರಿಕ ಸಂದೇಶವುಳ್ಳ ನಾಟಕ “ಅಮ್ಮೆರ್” ಮುಂದಿನ ದಿನಗಳಲ್ಲಿ ಹಲವಾರು ಪ್ರದರ್ಶನಗಳನ್ನು ಕಾಣಲಿದೆ.