ಲಿಫ್ಟ್ ದುರಂತಕ್ಕೆ ಯುವಕ ಬಲಿ -ರಕ್ಷಣೆ ವೇಳೆ ಏಕಾಏಕಿ ಚಲಿಸಿದ ಲಿಫ್ಟ್; ಉರ್ವ ಠಾಣೆಯಲ್ಲಿ ಪ್ರಕರಣ ದಾಖಲು

Prakhara News
1 Min Read

ಮಂಗಳೂರು: ನಗರದ ಕುಂಟಿಕಾನ ಸಮೀಪದ ಆಟೋಲೈನ್ಸ್ ಡೆಲಿವರಿ ಸಂಸ್ಥೆಯ ಕಟ್ಟಡದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಯುವಕ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.

ಮೃತರನ್ನು ಬೆಳಗಂಡಿ ತಾಲೂಕಿನ ಬೆಳಾಲು ಗ್ರಾಮದ ಪೊಂಜಿಕರೆ ನಿವಾಸಿ ನಾಫಲ್ (28) ಎಂದು ಗುರುತಿಸಲಾಗಿದೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನಾಫಲ್ ಅವರು ಲಿಫ್ಟ್ ಮೂಲಕ ಮೇಲ್ಮಹಡಿಗೆ ತೆರಳುತ್ತಿದ್ದ ವೇಳೆ ಲಿಫ್ಟ್ ನೆಲಮಹಡಿ ಮತ್ತು ಮೊದಲ ಮಹಡಿ ನಡುವಿನ ಭಾಗದಲ್ಲಿ ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿತ್ತು ಎಂದು ತಿಳಿದು ಬಂದಿದೆ.

ಈ ವೇಳೆ ಲಿಫ್ಟ್‌ನೊಳಗೆ ಸಿಲುಕಿಕೊಂಡಿದ್ದ ನಾಫಲ್ ಅವರು ಹೊರಬರುವ ಪ್ರಯತ್ನದಲ್ಲಿ ಮುಖಭಾಗಕ್ಕೆ ಗಂಭೀರ ಗಾಯಗೊಂಡಿದ್ದರು ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಸಹೋದ್ಯೋಗಿಗಳು ರಕ್ಷಣೆ ಕಾರ್ಯಕ್ಕೆ ಮುಂದಾಗಿದ್ದರು. ಲಿಫ್ಟ್ ಮೊದಲ ಮಹಡಿಯಲ್ಲಿ ಅರ್ಧ ಭಾಗ ಮಾತ್ರ ಕಾಣಿಸಿಕೊಂಡಿದ್ದರಿಂದ ಬಾಗಿಲನ್ನು ಬಲವಂತವಾಗಿ ತೆರೆಯಲಾಗಿತ್ತು.

ಸಹೋದ್ಯೋಗಿಗಳು ನಾಫಲ್ ಅವರನ್ನು ಕೈಹಿಡಿದು ಮೇಲಕ್ಕೆ ಎಳೆಯುವ ಸಂದರ್ಭದಲ್ಲಿ ಏಕಾಏಕಿ ಲಿಫ್ಟ್ ಚಲನೆಗೊಂಡಿದ್ದು, ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡರು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಿಫ್ಟ್ ದೋಷ ಹಾಗೂ ಸುರಕ್ಷತಾ ನಿರ್ಲಕ್ಷ್ಯದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment