ಸುರತ್ಕಲ್ : ಸುಭಾಷಿತನಗರದ ಬಂಟರ ಭವನದ ಬಳಿ ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಹೊಡೆದಾಟ ನಡೆಸಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟುಮಾಡಿದ ಆರೋಪದ ಮೇಲೆ ಇಬ್ಬರು ಸಕ್ರಿಯ ರೌಡಿಶೀಟರ್‌ಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಕೋಡಿಕೆರೆ ಲೋಕೇಶ್‌ನ ಸಹಚರ ವಿಶ್ವ ಅಲಿಯಾಸ್ ವಿಶ್ವನಾಥ (43) ಮತ್ತು ದಿನೇಶ್ ಆರ್. ಶೆಟ್ಟಿ ಮುಂಚೂರು (36) ಪ್ರಕರಣ ದಾಖಲಾದ ರೌಡಿಶೀಟರ್‌ಗಳು. ಈ ಇಬ್ಬರೂ ಸುರತ್ಕಲ್ ಪೊಲೀಸ್ ಠಾಣೆಯ ಸಕ್ರಿಯ ರೌಡಿಶೀಟರ್ ಪಟ್ಟಿಯಲ್ಲಿದ್ದು, ಇವರ ವಿರುದ್ಧ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಬಾಂಡ್ ಪಡೆದುಕೊಳ್ಳಲಾಗಿತ್ತು.

ಮೇ 9ರಂದು ರಾತ್ರಿ ಸುಮಾರು 10:45ಕ್ಕೆ ಬಂಟರ ಭವನದ ಎದುರು ಇಬ್ಬರೂ ಪರಸ್ಪರ ಕೈಗಳಿಂದ ಹೊಡೆದಾಡಿಕೊಂಡಿದ್ದರು. ಈ ಘಟನೆಯು ಸ್ಥಳೀಯರಲ್ಲಿ ಭಯ ಮತ್ತು ಆತಂಕ ಮೂಡಿಸಿತ್ತು. ಬುಧವಾರ ಸಂಜೆ ಗಸ್ತಿನಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಜನಾರ್ಧನ ನಾಯ್ಕ್ ಅವರಿಗೆ ಬಾತ್ಮೀದಾರರಿಂದ ಈ ಮಾಹಿತಿ ಲಭಿಸಿದೆ. ದ್ವೇಷದ ಹಿನ್ನೆಲೆಯಲ್ಲಿ ಈ ಗುಂಪುಗಳು ಮುಂದಿನ ದಿನಗಳಲ್ಲಿ ಅಹಿತಕರ ಘಟನೆಗಳಲ್ಲಿ ಭಾಗಿಯಾಗುವ ಸಾಧ್ಯತೆ ಹಿನ್ನಲೆ ಸಾರ್ವಜನಿಕ ಶಾಂತಿ ಕಾಯುವ ದೃಷ್ಟಿಯಿಂದ ಪೊಲೀಸರು ಕಲಂ 194(2) ಬಿ.ಎನ್.ಎಸ್ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಿದ್ದಾರೆ.



