ಕಾರ್ಕಳ:ಜು.14ರಂದು ಮಹಿಳೆಯೋರ್ವರು ಸೊಸೈಟಿಯ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಸಂತೋಷ್ ಯಾನೆ ಹರಿತನಯ ದೇವಾಡಿಗ ಹೊಸ್ಮಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಹರಿತನಯ ಕಾರ್ಕಳ ಮಾರ್ಕೆಟ್ ರೋಡ್ ನ ಮಹಿಳಾ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಮೀಳಾ ಎಂಬುವವರಿಗೆ ಹಣಕ್ಕಾಗಿ ಪೀಡಿಸುತ್ತಿದ್ದ. ಇದರಿಂದ ಬೇಸತ್ತು ಪ್ರಮೀಳಾರವರು ಸೊಸೈಟಿಯ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತಂತೆ ಪ್ರಮೀಳಾರವರ ಸಹೋದರ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿತ್ತು. ಶನಿವಾರದಿಂದ ನಾಪತ್ತೆಯಾಗಿದ್ದ ಸಂತೋಷ್ ಈದುವಿನ ಮನೆಯೊಂದರಿಂದ ಸೀರೆ ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ. ಇದೀಗ ಈದು ಮಾಪಾಲು ಹಾಡಿಯೊಂದರಲ್ಲಿ ಸಂತೋಷ್ ಶವ ಆತ್ಮಹತ್ಯೆಗೈದ ರೀತಿಯಲ್ಲಿ ಪತ್ತೆಯಾಗಿದೆ. ಶವ ಕೊಳೆತು ಹೋಗಿದ್ದು ಆತ್ಮಹತ್ಯೆಗೈದು ಎರಡು ದಿನ ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಸಂತೋಷ್ ಯಾನೆ ಹರಿತನಯ ಪತ್ನಿ ಹಾಗೂ ಪುಟ್ಟ ಮಗುವನ್ನು ಅಗಲಿದ್ದಾನೆ. ತಾನೂ ಮಾಡಿದ ವಿಪರೀತ ಸಾಲ ತೀರಿಸಲಾಗದೆ ನೊಂದು ಆತ್ಮಹತ್ಯೆ ಮಾಡಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.