ನೆಲ್ಯಾಡಿ: ಕಳೆದ ತಿಂಗಳು ಮಾರ್ಚ್ 29 ರಂದು ಅಗಲಿದ ತಮ್ಮ ಮಗ ಸುದೀಪ್ ರೈ ನೆನಪಿಗಾಗಿ ಅವರನ್ನು ನೆನಪನ್ನು ಶಾಶ್ವತವಾಗಿ ಇರಿಸಲು ಇದೇ ಬರುವ ಮೇ 1 ಶುಕ್ರವಾರ ವೈಶಾಖ ಹುಣ್ಣಿಮೆ, ಬುದ್ಧ ಪೂರ್ಣಿಮೆ ಹಾಗೂ ಕಾರ್ಮಿಕ ದಿನಾಚರಣೆಯ ಶುಭ ದಿನದಂದು ಮಧ್ಯಾಹ್ನ 12:05 ಗಂಟೆಗೆ ಒಂದು ವಿಶೇಷ ಸ್ಮರಣಾರ್ಥ ಕಾರ್ಯಕ್ರಮವನ್ನು ನಡೆಸಲು ಮನೆಯವರು ನಿರ್ಧರಿಸಿದ್ದಾರೆ.


ಈ ಕಾರ್ಯಕ್ರಮದಲ್ಲಿ ಕಾರ್ಕಳದ ಶ್ರೀ ಜಗದೀಶ್ ಶೆಟ್ಟಿ, ನಿವೃತ್ತ ಡಿ.ವೈ.ಎಸ್.ಪಿ ಶ್ರೀ ರಮೇಶ್ ಶೃಂಗೇರಿ ಹಾಗೂ ಮಹಿಳಾ ಮತ್ತು ಮಕ್ಕಳ ಪರ ಕಾನೂನು ಹೋರಾಟಗಾರರಾದ ಶ್ರೀಮತಿ ರಜನಿ ರಾಜ್ ಅವರ ಗೌರವ ಉಪಸ್ಥಿತಿ ಇರಲಿದ್ದು ಅವರ ಸಮ್ಮುಖದಲ್ಲಿ “ಬಿ. ಸುದೀಪ್” ನ ನೆನಪಿಗಾಗಿ “ಕಲ್ಪವೃಕ್ಷ” – “ಶ್ರೀ ಗಂಧ” ಹಾಗೂ ಇನ್ನಿತರ ಸಸಿಗಳನ್ನು ನೆಟ್ಟು ಅವನ ನೆನಪನ್ನು ಸದಾ ಹಸಿರಾಗಿರಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.


ಸುದೀಪ್ ರೈ ಅವರು ಕಳೆದ ತಿಂಗಳು ಮಾರ್ಚ್ 17 ರಂದು ವಿಷ ಸೇವನೆ ಮಾಡಿದ್ದು ಇದಕ್ಕೆ ಮುಖ್ಯ ಕಾರಣವು ಸುದೀಪ್ ರನ್ನು ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡು ತನ್ನ ಪ್ರೇಮದ ಜಾಲಕ್ಕೆ ಸಿಲುಕಿಸಿ ಮನೆಯವರಿಗೂ ತಿಳಿಸದೆ ಒತ್ತಡ ಹೇರಿ ವಿವಾಹವಾದ ಕಾರ್ಕಳದ ಬಂಗ್ಲೆ ಗುಡ್ಡೆ ನಿವಾಸಿ ಸೌಮ್ಯ ಶೆಟ್ಟಿಯಾಗಿದ್ದು ಸುದೀಪನಿಗೆ ತೀವ್ರ ಮಾನಸಿಕ ಹಿಂಸೆ ನೀಡಿದ್ದಳು.

ಸುದೀಪ್ ರೈ ಯವರಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29 ರಂದು ಮಂಗಳೂರಿನ ಯೆನೆಪೋಯ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಸದ್ಯ ಮಾನಸಿಕ ಕಿರುಕುಳ, ಆತ್ಮ ಹತ್ಯೆ ಪ್ರಚೋದನೆ ಪ್ರಕರಣದ ಅಡಿಯಲ್ಲಿ ಸೌಮ್ಯ ಶೆಟ್ಟಿಯನ್ನು ಕಾರ್ಕಳದ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದು ಸದ್ಯಕ್ಕೆ ಸೌಮ್ಯಳಿಗೆ ಜೈಲೂಟ ನಿಗದಿಯಾಗಿದೆ.
ಸೌಮ್ಯ ಶೆಟ್ಟಿಗೆ ಈಗಾಗಲೇ ಎರಡು ವಿವಾಹವಾಗಿದ್ದು ಅನೇಕ ಹುಡುಗರ ಜೊತೆ ಸಂಬಂಧ ಬೆಳೆಸಿ ಅವರ ಮಾನಸಿಕ ನೆಮ್ಮದಿ ಹಾಳು ಮಾಡಿದ್ದಾಳೆ ಎಂದು ಮಾಜಿ ಪ್ರಿಯಕರ ವೇಣು ಶೆಟ್ಟಿ ಕೂಡ ಆರೋಪ ಮಾಡಿದ್ದಾರೆ. ಈ ಪ್ರಕರಣವನ್ನು ಉತ್ತಮ ಮಟ್ಟದ ತನಿಖೆಯ ಮೂಲಕ ನಡೆಸಿ ಆಕೆಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪೋಷಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.


