ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಯುವತಿಯೊಬ್ಬಳು ತನ್ನ ನಿಶ್ಚಿತಾರ್ಥದ ಹಿಂದಿನ ದಿನವೇ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ. ಮುಸ್ಲಿಂ ಯುವಕನೊಬ್ಬ ಆಕೆಯನ್ನು ಪುಸಲಾಯಿಸಿ ಕರೆದೊಯ್ದಿದ್ದಾನೆ ಎಂದು ಪೋಷಕರು ಆರೋಪಿಸಿದ್ದು, ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.


ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದ ಶಂಕರಮ್ಮ ಕೆರಿಮೆತ್ತಿಹಳ್ಳಿ (24) ಎಂಬ ಯುವತಿ ಕಳೆದ ರಾತ್ರಿ ಮನೆಯಿಂದ ಕಾಣೆಯಾಗಿದ್ದಾಳೆ. ಮೇ 11 ರಂದು ಶಂಕರಮ್ಮನ ಮದುವೆ ನಿಗದಿಯಾಗಿತ್ತು. ಅ ಪ್ರಯುಕ್ತ ಇಂದು ನಿಶ್ಚಿತಾರ್ಥ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ನಿಶ್ಚಿತಾರ್ಥಕ್ಕೂ ಕೇವಲ ಒಂದು ದಿನ ಮೊದಲು ರಾತ್ರಿ ಶಂಕರಮ್ಮ ನಾಪತ್ತೆಯಾಗಿದ್ದಾರೆ.


ಯುವತಿಯ ಪೋಷಕರು, ನರೇಗಲ್ ಗ್ರಾಮದ ಇಬ್ರಾಹಿಂ ನೆಗಳೂರು ಎಂಬಾತ ತಮ್ಮ ಮಗಳನ್ನು ಮದುವೆಯ ಆಮಿಷ ತೋರಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರಮ್ಮ ಬಿಕಾಂ ಮುಗಿಸಿದ ನಂತರ ಅಕ್ಕಿಆಲೂರಿಗೆ ಕೆಲಸಕ್ಕೆ ಹೋಗುತ್ತಿದ್ದಳು. ಅಲ್ಲಿಯೇ ಇಬ್ರಾಹಿಂನ ಪರಿಚಯವಾಯಿತು. ಅವನು ಮೊದಲೇ ಯೋಜನೆ ರೂಪಿಸಿ ನಮ್ಮ ಮಗಳನ್ನು ಸಂಪರ್ಕಿಸಿದ್ದ ಎಂದು ಆಕೆಯ ತಂದೆ ಆರೋಪಿಸಿದ್ದಾರೆ.

ನೆರೆಮನೆಯವರು ಮತ್ತು ಸ್ಥಳೀಯರ ಮಾಹಿತಿ ಪ್ರಕಾರ ಇಬ್ರಾಹಿಂ ಆ ಪ್ರದೇಶದಲ್ಲಿ ಕಳೆದ ರಾತ್ರಿ ಓಡಾಡುತ್ತಿದ್ದುದು ಕಂಡುಬಂದಿದೆ. ಯುವತಿ ಮನೆಯಿಂದ ಹೊರಟ ಸ್ವಲ್ಪ ಹೊತ್ತಿನಲ್ಲೇ ಇಬ್ರಾಹಿಂ ಜೊತೆಗೆ ಆಕೆ ಪರಾರಿಯಾಗಿದ್ದಾಳೆ. ಈ ಬಗ್ಗೆ ಆಡೂರು ಪೊಲೀಸ್ ಠಾಣೆಯಲ್ಲಿ ಯುವತಿಯ ಪೋಷಕರು ದೂರು ದಾಖಲಿಸಿದ್ದು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಿಶೇಷ ತಂಡ ರಚಿಸಿದ್ದಾರೆ. ಯುವತಿ ಮತ್ತು ಇಬ್ರಾಹಿಂ ಜೊತೆಗೆ ಸಂಪರ್ಕದಲ್ಲಿದ್ದವರ ವಿಚಾರಣೆಯನ್ನು ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.


