ಉಡುಪಿ: ಚಿಕ್ಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿಮಹಾರಾಜ ಮುನಿಗಳ ಅಮಾನವೀಯ ಕೊಲೆ ಸಮಗ್ರ ಮನುಕುಲಕ್ಕೆ ಬಗೆದ ಮಹಾ ದ್ರೋಹ. ಶಾಂತಿ, ಸೌಹಾರ್ಧತೆ, ಸಮನ್ವಯತೆಯ ಸಂಕೇತವಾಗಿರುವ ಕಾಂಗ್ರೆಸ್ ಇದನ್ನು ಖಂಡಿಸುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಸರ್ವಸಂಘ ಪರಿತ್ಯಾಗಿಯಾಗಿ ಜಿನಧರ್ಮ ಪ್ರತಿಪಾದಿಸಿದ ಅಹಿಂಸಾ ಮಾರ್ಗದಲ್ಲಿ ನಡೆದುಬಂದ ಈ ದಿಗಂಬರ ಮಹಾ ಮುನಿಯ ಕೊಲೆ ಗಡುಕರಿಗೆ ಕಠಿಣ ಶಿಕ್ಷೆ ಆಗಬೇಕಿದೆ. ಇದು ಆಳುವ ಸರಕಾರದ ಕರ್ತವ್ಯವೂ ಆಗಿದೆ. ಆ ನಿಟ್ಟಿನಲ್ಲಿ ಸರಕಾರ ಈಗಾಗಲೇ ಕಾರ್ಯಪ್ರವೃತ್ತವಾಗಿ ಹಂತಕರನ್ನು ಬಂಧಿಸಿ ಸೂಕ್ತ ತನಿಖೆಗಾಗಿ ಸಂಬಂಧಿತ ಇಲಾಖೆಗೆ ಆದೇಶಿಸಿದೆ. ಇದು ಈ ಸರಕಾರದ ಕಾರ್ಯಬದ್ಧತೆ ಮತ್ತು ಕರ್ತವ್ಯ ನಿಷ್ಠೆಗೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಆದಾಗ್ಯೂ ಸಮ್ಯಕ್ ದರ್ಶನ,ಜ್ಞಾನ, ಚಾರಿತ್ರ್ಯಗಳೆಂಬ ತ್ರೈರತ್ನ ಪ್ರತಿಪಾದನೆಯ ಪಂಚಪರಮೇಷ್ಠಿ ಪಥದ ಮಹಾಮುನಿಯ ಈ ಭೀಕರ ಕೊಲೆ, ಸಾವು ಮತ್ತು ಧರ್ಮವನ್ನು ರಾಜಕೀಯ ದೊಂದಿಗೆ ಸಮೀಕರಿಸುವ ಕೆಲವೊಂದು ಅಪರ ರಾಜಕೀಯ ಶಕ್ತಿಗಳಿಗೆ ಆಳುವ ಕಾಂಗ್ರೆಸ್ ಪಕ್ಷದ ತೇಜೋವದೆ ಮಾಡುವ ವ್ಯರ್ಥ ಪ್ರತಿಭಟನೆಯ ಸೊತ್ತಾಗಿ ಕಂಡುಬಂದದ್ದು ವಿಷಾದನೀಯ. ಸರಕಾರ ಈಗಾಗಲೇ ವರೂರು ಕ್ಷೇತ್ರದ ಗುಣಧರ ನಂದಿ ಮಹಾರಾಜ ಮುನಿಗಳೂ ಸೇರಿ ಎಲ್ಲ ಮುನಿಗಳ ಇಚ್ಛಾ ಪ್ರಸ್ತಾವನೆಯಂತೆ ಮುಂದಿನ ದಿನಗಳಲ್ಲಿ ಎಲ್ಲ ಧಾರ್ಮಿಕ ಮುಖಂಡರಿಗೆ ಸೂಕ್ತ ರಕ್ಷಣೆ ನೀಡಲು ಒಪ್ಪಿರುವುದು ಇಲ್ಲಿ ಉಲ್ಲೇಖನೀಯ. ಯಾಕೆಂದರೆ ಕಾಂಗ್ರೆಸ್ ಪಕ್ಷ ತಾನು ಪ್ರತಿಪಾದಿಸುತ್ತಾ ಬಂದ ವಿಶ್ವ ಕುಟುಂಬ ಚಿಂತನೆಯಯಡಿಯಲ್ಲಿ ಧರ್ಮ ಮತ್ತು ಧಾರ್ಮಿಕ ಪುರುಷರ ರಕ್ಷಣೆ ಮಾಡುತ್ತಲೇ ಬಂದಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.